ಹಾಸನ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿ ನಿತ್ಯವೂ ಸೂತಕದ ಮನೆಯಾಗಿದೆ. ಸರ್ಕಾರ ದಿವಾಳಿಯಾಗಿ ರಾಜ್ಯದೊಳಗೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮೈಕ್ರೋ ಫೈನಾನ್ಸ್‌ನಿಂದ ಸರಣಿ ಸಾವು ಆಗುತ್ತಿದೆ. ಇದನ್ನ ಕೇಳೋರಿಲ್ಲ. ಬಾಣಂತಿಯರ ಸಾವಿಗೆ ಏನು ಕ್ರಮ ಇಲ್ಲ. ಗುತ್ತಿದೆದಾರರ ಹಣ ಬಿಡುಗಡೆ ಇಲ್ಲದೆ ಸಾವಿಗೀಡಾಗುತ್ತಿದ್ದಾರೆ. ಅಧಿಕಾರಿಗಳ ಸಾವಿಗೆ ಸ್ಪಂದನೆ ಇಲ್ಲ. ಈ ಸರ್ಕಾರ ಇದೆಯೊ ಇಲ್ಲವೋ ಎಂಬ ಸ್ಥಿತಿ ಇದೆ ಎಂದರು.
ಸಿಎಂ, ಸಚಿವರು ಸಭೆ ಮೇಲೆ ಸಭೆ ಮಾಡಿದ್ದಾರೆ. ಆದರೇ ಸರ್ಕಾರ ಕಠಿಣ ಕ್ರಮ ಎಂದು ಭಜನೆ ಮಾಡುತ್ತಿದ್ದಾರೆ. ಫೈನಾನ್ಸ್ ಹಾವಳಿ ಮಾತ್ರ ನಿಂತಿಲ್ಲ. ಕಾಟಾಚಾರಕ್ಕೆ ಸುಗ್ರಿವಾಜ್ಞೆ ಎಂದು ಹೇಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್‌ನವರು ಈ ಸರ್ಕಾರವನ್ನು ಕೇರ್ ಮಾಡ್ತಾ ಇಲ್ಲ. ಉತ್ತರ ಪ್ರದೇಶದಲ್ಲಿ ಸಿಎಂ ಗುಡುಗಿದ್ರೆ ರೌಡಿಗಳು ಉತ್ತರ ಪ್ರದೇಶ ಅಲ್ಲ ದೇಶಬಿಟ್ಟೇ ಓಡಿ ಹೋಗ್ತಾರೆ. ನಮ್ಮ ಸಿಎಂ ಗುಡುಗಿದ್ದು ಆಯ್ತು, ಮಳೆ ಬಂದಿದ್ದು ಆಯ್ತು ಏನೂ ಕ್ರಮ ಆಗಿಲ್ಲ ಎಂದು ವ್ಯಂಗ್ಯವಾಡಿದರು.
ಕುಂಬಮೇಳದಲ್ಲಿ ೩೦ ಜನ ಮೃತಪಟ್ಟರು. ಅದಕ್ಕೆ ಕಾಂಗ್ರೆಸ್ ನಾಯಕರು ದೊಡ್ಡದಾಗಿ ಮಾತಾಡಿದ್ರು. ಇಲ್ಲಿ ನಿಮ್ಮ ತಪ್ಪಿನಿಂದ ೨೫ ಜನ ಸತ್ತಿದ್ದಾರೆ. ಖರ್ಗೆಯವರೆ ಇದು ನಿಮಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. ನಿಗಮಗಳ ಮೂಲಕ ಲೋನ್ ಕೊಟ್ಟಿದ್ದರೆ ಈ ಸಮಸ್ಯೆ ಯಾಕೆ ಬರ್ತಿತ್ತು. ನಾವಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ೬೦ ಕೋಟಿ ಕೊಟ್ಟಿದ್ದೆವು. ಇವರು ೪೦ ಕೋಟಿಗೆ ಇಳಿಸಿದ್ದಾರೆ. ನಿಮ್ಮ ಸರ್ಕಾರ ದಿವಾಳಿ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ನಾವು ಗ್ಯಾರಂಟಿ ಬೇಡಾ ಎನ್ನಲ್ಲ. ಎರಡು ಸಾವಿರ ಅಲ್ಲ ಐದು ಸಾವಿರ ಕೊಡಿ. ಎಲ್ಲವನ್ನು ಗುಡಿಸಿ ಗುಂಡಾಂತರ ಮಾಡಿ ಹೋಗಿ. ನವೆಂಬರ್ ೧೫ ಅಥವಾ ೧೬ಕ್ಕೆ ಸಿದ್ದರಾಮಯ್ಯ ಇಳಿಯಬೇಕಲ್ಲ. ನಂತರ ಡಿಕೆ ಬರ್ತಾರೊ, ಪರಮೇಶ್ವರ್ ಬರ್ತಾರೋ, ಜಾರಕಿಹೊಳಿ ಬರ್ತಾರೋ, ಯಾವ ಹುಳಿ ಬಂದರು ಏನೂ ಉಳಿದಿರಲ್ಲ. ನಮ್ಮ ರಾಜ್ಯದ ಬೊಕ್ಕಸ ಯಾವಾಗಲು ಖಾಲಿ ಆಗಿರಲಿಲ್ಲ. ಇಷ್ಟು ಪಾಪರ್ ಸರ್ಕಾರ ಇತಿಹಾಸದಲ್ಲಿ ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿ ಗೊಂದಲದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ರಾಜ್ಯದ ರಾಜಕೀಯದಲ್ಲಿ ಬಿಜೆಪಿ ಒಳಗಿನ ಬಣ ಜಗಳದ ಕುರಿತು ಮಾತನಾಡುತ್ತಾ, ನಾನು ಪಾರ್ಟಿಯ ಶಿಸ್ತಿನ ಸಿಪಾಯಿ, ಮನೆಯೊಳಗೆ ಏನು ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ. ಹೊರಗೆ ಏನು ಮಾತನಾಡಬೇಕು ಅದನ್ನು ಮಾತನಾಡಿದ್ದೇನೆ. ಇತಿಹಾಸದಲ್ಲಿ ನಾನು ಪಾರ್ಟಿ ವಿಚಾರಗಳನ್ನು ಹೊರಗಡೆ ಮಾತನಾಡಿಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಂದಾಗ ಕರ್ನಾಟಕದ ಸ್ಥಿತಿ-ಗತಿಗಳನ್ನು ವಿವರಿಸಿದ್ದೇನೆ. ನಾನು ಕೂಡ ದೆಹಲಿ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ. ಮುಂದಿನ ಹದಿನೈದು-ಇಪ್ಪತ್ತು ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನ ಹೊರಬೀಳಲಿದೆ ಎಂದರು.
ಬಿಜೆಪಿ ಬಿಟ್ಟು ಹೋದವರ ಉದ್ಧಾರವಾಗಿಲ್ಲ. ಬಿಜೆಪಿ ನನ್ನ ಶಕ್ತಿ. ಆಮೇಲೆ ಅಶೋಕ್ ಎಂದ ಅವರು, ಆಚೆ ಹೋದರೆ ನನ್ನ ಶಕ್ತಿ ಜೀರೋ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಶಾಸಕ ಸಿಮೆಂಟ್ ಮಂಜು, ಬಿ.ಹೆಚ್. ನಾರಾಯಣಗೌಡ, ಪ್ರಸನ್ನಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ನಿತ್ಯ ಸೂತಕ ಮನೆಯಾಗಿದೆ – ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ
RELATED ARTICLES