ಮಡಿಕೇರಿ : ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕಾಡು ಹಂದಿ ದಾಳಿ ಮಾಡಿದ ಘಟನೆ ಕೊಡಗು ಜಿಲ್ಲೆಯ ಸುಂಟಕೊಪ್ಪದಲ್ಲಿ ನಡೆದಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಸರಸ್ವತಿ ಗಾಯಗೊಂಡ ಮಹಿಳೆ. ಸುಂಟಿಕೊಪ್ಪ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ಸರಸ್ವತಿ ಅವರು ಇತರೆ ಕಾರ್ಮಿಕರೊಂದಿಗೆ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಕಾಡು ಹಂದಿಯೊಂದು ಏಕಾಏಕಿ ಅವರ ಮೇಲೆ ಎರಗಿದೆ. ಜೊತೆಗಿದ್ದ ಕಾರ್ಮಿಕರು ತಕ್ಷಣಕ್ಕೆ ನೆರವಿಗೆ ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡ ಸರಸ್ವತಿ ಅವರನ್ನು ಗ್ರಾಪಂ ಸದಸ್ಯರಾದ ಕೆ.ಕೆ. ಪ್ರಸಾದ್ ಕುಟ್ಟಪ್ಪ ಹಾಗೂ ಕೆ.ಎಂ. ಆಲಿಕುಟ್ಟಿ ಅವರು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಕಾಡಾನೆ, ಹುಲಿಗಳ ಕಾಟದಿಂದ ಬೇಸತ್ತಿದ್ದ ಜನತೆಗೆ ಇದೀಗ ಕಾಡು ಹಂದಿಗಳು ಕೂಡಾ ಜೀವಕ್ಕೆ ಸಂಚಕಾರವಾಗುತ್ತಿದೆ.