ಹಾಸನ : ನಮ್ಮ ಸಮಾಜದಲ್ಲಿ ಮಕ್ಕಳಾಗಿಲ್ಲ ಅಂತ ದೈವ, ದೇವರುಗಳಿಗೆ ಹರಕೆ ಹೊತ್ತು ಕೈಮುಗಿದು ಪ್ರಾರ್ಥಿಸುತ್ತಾ ದಿನಗಳೆಯುವ ಮಂದಿ ಅದೆಷ್ಟೋ ಇದ್ದಾರೆ. ಮದ್ವೆಯಾಗಿ ಹಲವು ವರ್ಷಗಳೇ ಕಳೆದ್ರೂ ಮಕ್ಕಳಾಗದೆ, ಇಂದಲ್ಲ ನಾಳೆ ನಮಗೆ ಒಳಿತಾಗಬಹುದೆಂಬ ಆಶಾಭಾವನೆ ಅವರದ್ದು. ಆದ್ರೆ ಇನ್ನೂ ಕೆಲವರಿರ್ತಾರೆ ೯ ತಿಂಗಳು ಹೊಟ್ಟೆಯಲ್ಲಿ ಹೊತ್ತು, ಹೆರಿಗೆ ಬಳಿಕ ಅದನ್ನ ಬೀದಿಗೆ ಬಿಸಾಡುವ ಪಾಪಿ ಸಮೂಹ..!
ಇಂಥ ಪ್ರಕರಣಗಳು ಆಗಾಗ್ಗೆ ನಮ್ಮ ಸಮಾಜದಲ್ಲಿ ಬೆಳಕಿಗೆ ಬರುತ್ತಿರುತ್ತದೆ. ಇಂಥ ಘಟನೆಯೊಂದು ಹಾಸನದಲ್ಲಿ ನಡೆದಿದೆ. ಹಾಸನ ನಗರದ ಹೇಮಾವತಿ ನಗರದ ಕಾರ್ಮೆಲ್ ಚರ್ಚ್ ಬಳಿ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹವೊಂದು ಪತ್ತೆಯಾಗಿದೆ. ಆಗ ತಾನೆ ಹುಟ್ಟಿದ ಮಗುವನ್ನು ರಸ್ತೆ ಬದಿ ಚರಂಡಿಗೆ ಎಸೆದು ಕ್ರೌರ್ಯ ಮೆರೆದಿದ್ದಾರೆ ದುರುಳರು.
ಬಟ್ಟೆಯಲ್ಲಿ ಸುತ್ತಿ, ಪ್ಲಾಸ್ಟಿಕ್ ಕವರ್‌ನಲ್ಲಿ ಕಸದ ಜೊತೆ ತುಂಬಿಕೊಂಡು ಬಂದು ಮಗುವನ್ನ ಎಸೆದು ಹೋಗಿದ್ದಾರೆ, ಮಗುವನ್ನು ಎಸೆದು ಕೆಲವು ಗಂಟೆಗಳು ಆಗಿದ್ದು, ಇರುವೆಗಳು ಮುತ್ತಿಕ್ಕಿಕೊಂಡಿರುವ ಚಿತ್ರಣ ಕಂಡುಬಂದಿದೆ. ಇದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹೆಣ್ಣು ಮಗು ಅನ್ನುವ ಕಾರಣಕ್ಕೆ ಈ ರೀತಿ ಮಾಡಿರುವ ಸಂಶಯ ಇದೆ. ಚರಂಡಿಯಲ್ಲಿ ಅನಾಥವಾಗಿ ಬಿದ್ದಿದ್ದ ಮಗುವನ್ನು ಕಂಡು ಜನ ಮರುಕ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡಿದವರಿಗೆ ಹಿಡಿ ಶಾಪವನ್ನೂ ಜನ ಹಾಕ್ತಿದ್ದಾರೆ. ಹಾಸನ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತ ಶಿಶುವನ್ನು ಕಸದೊಂದಿಗೆ ಚರಂಡಿಗೆ ಎಸೆದ ಪಾಪಿಗಳು – ಹಾಸನದಲ್ಲೊಂದು ಅಮಾನವೀಯ ಪ್ರಕರಣ..!
RELATED ARTICLES