ಬೆಂಗಳೂರು : ಎಐ ತಂತ್ರಜ್ಞಾನ ಬಂದ್ಮೇಲೆ ಆಗುತ್ತಿರುವ ಎಡವಟ್ಟುಗಳು ಒಂದೆರೆಡಲ್ಲ. ಯಾರದ್ದೋ ದೇಹಕ್ಕೆ ಇನ್ಯಾರದ್ದೋ ಮುಖ್ಯ… ಎಲ್ಲೋ ಇರುವ ವ್ಯಕ್ತಿಯನ್ನು ಇನ್ನೆಲ್ಲೋ ಇರುವಂತೆ ಚಿತ್ರಿಸೋದು… ಕೊಂಚವೂ ಅನುಮಾನ ಬಾರದ ರೀತಿಯಲ್ಲಿ ಎಐ ಚಿತ್ರಗಳು ಹರಿದಾಡುತ್ತಿವೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಂತು ಎಐ ಹಾವಳಿ ಅಷ್ಟಿಷ್ಟಲ್ಲ. ಇದೇ ಎಐ ಚಿತ್ರವೊಂದು ಈಗ ಇಬ್ಬರು ಪ್ರಮುಖ ವ್ಯಕ್ತಿಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಬಹುಭಾಷಾ ನಟ ಪ್ರಕಾಶ್ ರೈ ಕುಂಭಮೇಳದಲ್ಲಿ ತೀರ್ಥ ಸ್ನಾನ ಮಾಡುತ್ತಿರುವಂತೆ ಕಾಣುವ ಒಂದು ಚಿತ್ರ ಕೆಲವು ದಿನದಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಲಪಂಥೀಯ ನೆಲೆಯವರು ಈ ಚಿತ್ರವನ್ನು ಬಳಸಿಕೊಂಡು ಪ್ರಕಾಶ್ ರೈ ಅವರ ಸಿದ್ಧಾಂತವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಅದು ಅಸಲಿಗೆ ಎಐ ಚಿತ್ರ ಅನ್ನೋದು ಗೊತ್ತಾಗಿದೆ.

ಈ ಫೋಟೋವನ್ನು ಬಿಗ್ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಕೂಡಾ ಶೇರ್ ಮಾಡಿಕೊಂಡಿದ್ದರು. ಕೃತಕ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅಪಪ್ರಚಾರ ನಡೆಸಿದ ಆರೋಪದ ಮೇಲೆ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಶಾಂತ ಸಂಬರ್ಗಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ಪ್ರಕಾಶ್ ರೈಯ ಫೋಟೋ ಎಐ ತಂತ್ರಜ್ಞಾನ ಬಳಸಿ ತಯಾರಿಸಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಸಂಬರ್ಗಿ ಅವರು, ‘ಪ್ರಕಾಶ್ ರಾಜ್ ಕುಂಭಮೇಳಕ್ಕೆ ಹೋಗಿಲ್ಲ ಅನ್ನೋದೇ ಸಂತೋಷ. ನನಗೆ ಆ ಫೋಟೋ ವಾಟ್ಸಪ್ನಲ್ಲಿ ಬಂದಿತ್ತು. ಐದು ದಿನಗಳ ಬಳಿಕ ‘ಪ್ರಕಾಶ್ ರಾಜ್ ಕುಂಭಮೇಳಕ್ಕೆ ಹೋಗಿದ್ದರಲ್ಲ?’ ಅಂತಾ ಹಾಕಿದ್ದೆ. ಅವರ ಪಾಪ ಪರಿಹಾರ ಆಯ್ತು ಅಂತ ಅಲ್ಲಗೆಳೆಯಲು ಹಾಕಿರಲಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಅವರನ್ನ 25 ವರ್ಷದಿಂದ ನಾನು ನೋಡುತ್ತಿದ್ದೇನೆ. ಅವರೇನು ನನಗೆ ಹೊಸಬರಲ್ಲ. 2018 ರಲ್ಲಿ ಶೃತಿ ಹರಿಹರನ್ Metoo ವಿಚಾರವಾಗಿ ದೂರು ನೀಡಿದ್ರು. ಆಗ ಆಕೆ ಪರ ಪ್ರಕಾಶ್ ರಾಜ್ ನಿಂತಿದ್ರು. ಆಗಿನಿಂದ ಪ್ರಕಾಶ್ ರಾಜ್ ನಮ್ಮನ್ನ ಗುರಿಯಾಗಿ ಇಟ್ಟುಕೊಂಡಿದ್ರು. ಅವರ ರಾಜಕೀಯ ವಿಶ್ಲೇಷಣೆಗಳನ್ನ ಸಾಮಾಜಿಕ ಜಾಲತಾಣದಲ್ಲಿ ವಾಪಸ್ಸು ಕೊಡುತ್ತಿದ್ದೆವು. ಈಗ ನನ್ನ ಒಂದು ಪೋಸ್ಟ್ ಇಟ್ಟುಕೊಂಡು ದೂರು ದಾಖಲಿಸಿದ್ದಾರೆ. ಲಕ್ಷಾಂತರ ಜನ ಅದೇ ಪೋಟೋವನ್ನ ಹಾಕಿದ್ದಾರೆ. ಕಾನೂನು ರೀತಿಯಲ್ಲಿ ಏನು ಉತ್ತರ ಕೊಡಬೇಕು ಕೊಡುತ್ತೇನೆ. ಆ ಪೋಟೋ ಎಲ್ಲಿಂದ ಬಂತು ಹೇಗೆ ಬಂತು, ನನಗಿಂತ ಮುಂಚೆ ಎಷ್ಟು ಜನ ಹಾಕಿದ್ರು, ಯಾವ ಕಾರಣದಿಂದ ನಾನು ಹಾಕಿದೇ ಎಂಬುದರ ಬಗ್ಗೆ ಉತ್ತರ ಕೊಡುತ್ತೇನೆ ಎಂದರು.
ಒಂದು ಚಿಕ್ಕ ವಿಚಾರವನ್ನ ದೊಡ್ಡದು ಮಾಡಿ ರಾಜಕೀಯ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲಿಯೂ ಕೆಲಸ ಇಲ್ಲದೇ ಇದ್ದಾಗ ಪ್ರಶಾಂತ್ ಸಂಬರ್ಗಿ ಹೆಸರಲ್ಲಿ ಪ್ರಚಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ನಮ್ಮ ಮೇಲೆ ಈ ಹಿಂದೆ ಯಾವುದೇ ಕೇಸ್ ಅವರು ದಾಖಲು ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನನ್ನ ಮೇಲೆ ಕೇಸ್ ಹಾಕಿದ್ದಾರೆ ಎಂದು ಸಂಬರಗಿ ಕಿಡಿಕಾರಿದರು.
ಪ್ರಕರಣ ಸಂಬಂಧ ಪೊಲೀಸ್ ನೋಟೀಸ್ ಇನ್ನು ನನಗೆ ಬಂದಿಲ್ಲ. ನಾನು ಬೆಂಗಳೂರಿನ ನಿವಾಸಿ ಅವರು ಮೈಸೂರಿನಲ್ಲಿ ಕೇಸ್ ದಾಖಲಿಸಿದ್ದಾರೆ. ಕಾನೂನು ಸಲಹೆಗಳನ್ನ ಪಡೆದು ಹೋರಾಟ ಮಾಡುತ್ತೇನೆ. ನಾವೇನು ಅವರ ಬೆತ್ತಲೆ ಪೋಟೋ ಹಾಕಿಲ್ಲ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಒಳ್ಳೆ ರೀತಿಯಾಗಿ ಸಂತಸ ವ್ಯಕ್ತಪಡಿಸಿದ್ದೇವೆ ಅಷ್ಟೇ ಎಂದಿದ್ದಾರೆ.
