Advertisement

Homebig breakingಮೈಕ್ರೋ ಫೈನಾನ್ಸ್‌ಗೆ ಕಡಿವಾಣ - ಸುಗ್ರೀವಾಜ್ಞೆಗೆ ಕೊನೆಗೂ ಬಿತ್ತು ರಾಜ್ಯಪಾಲರ ಅಂಕಿತ..!

ಮೈಕ್ರೋ ಫೈನಾನ್ಸ್‌ಗೆ ಕಡಿವಾಣ – ಸುಗ್ರೀವಾಜ್ಞೆಗೆ ಕೊನೆಗೂ ಬಿತ್ತು ರಾಜ್ಯಪಾಲರ ಅಂಕಿತ..!

ಬೆಂಗಳೂರು : ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅಂಕಿತ ಹಾಕಿದ್ದಾರೆ.
ಈ ಮೊದಲು ಕಳುಹಿಸಿದ್ದ ಸುಗ್ರೀವಾಜ್ಞೆ ಸಂಬಂಧ ಕೆಲವು ವಿವರಣೆ ಕೇಳಿ ಸರ್ಕಾರಕ್ಕೆ ಮರಳಿಸಿದ್ದರು. ಆ ಬಳಿಕ ಸರ್ಕಾರ ನೀಡಿದ ಸಮರ್ಥನೆಗಳಿಗೆ ಒಪ್ಪಿಗೆ ಸೂಚಿಸುವ ಜತೆಗೆ ಕೆಲವೊಂದು ಸಲಹೆಗಳನ್ನು ನೀಡಿ, ಈ ಬಗ್ಗೆ ಅಧಿವೇಶನದಲ್ಲಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆಯೂ ಈ ವೇಳೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಈ ಮೂಲಕ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಮುಂಬರುವ ಅಧಿವೇಶನದಲ್ಲಿ ಚರ್ಚೆಯಾಗಿ ವಿಧೇಯಕ ಜಾರಿಯಾಗುವ ನಿರೀಕ್ಷೆ ಇದೆ.

ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳು ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಆದರೆ, ಈ ಸುಗ್ರೀವಾಜ್ಞೆಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರು ಸರ್ಕಾರಕ್ಕೆ ವಾಪಸು ಕಳುಹಿಸಿದ್ದರು. ಬಳಿಕ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಜಾರಿಗೊಳಿಸುವ ಅನಿವಾರ್ಯತೆ ಬಗ್ಗೆ ಸಮರ್ಥನೆ ನೀಡಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು.
ಮುಂದಿನ ದಿನದಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ವಿವಾದಗಳು ಸೃಷ್ಟಿಯಾದರೆ ಅವುಗಳನ್ನು ಇತ್ಯರ್ಥಪಡಿಸಲು ಸಾಲಗಾರ ಮತ್ತು ಲೇವಾದೇವಿದಾರನ ನಡುವೆ ಮಧ್ಯಸ್ಥಗಾರನಾಗಿ ಕಾರ್ಯ ನಿರ್ವಹಿಸಲು ಸರ್ಕಾರವು ಒಂಬುಡ್ಸ್‌ಮನ್‌ ನೇಮಕ ಮಾಡಬಹುದು. ನೋಂದಣಿಯಾಗದ ಮೈಕ್ರೋ ಫೈ‌ನಾನ್ಸ್ ಸಂಸ್ಥೆಗಳು ಅಕ್ರಮ ಹಣ ವರ್ಗಾವಣೆ ಮಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಉತ್ತಮ ಹೆಜ್ಜೆಯಾಗಿದೆ. ಸುಗ್ರೀವಾಜ್ಞೆಯು ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ ಅದು ಉಂಟು ಮಾಡುವ ಕಾನೂನು ಮತ್ತು ಸಾಮಾಜಿಕ ಪರಿಣಾಮವನ್ನು ಉಭಯ ಸದನದಲ್ಲಿ ವಿವರವಾಗಿ ಚರ್ಚಿಸಬೇಕಾಗಿದೆ, ಸುಗ್ರೀವಾಜ್ಞೆ ಜಾರಿಗೊಳಿಸುವ ವೇಳೆ ಈ ಸಲಹೆ ಪಾಲಿಸಬೇಕು ಎಂದು ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.

ಸುಗ್ರೀವಾಜ್ಞೆಯಲ್ಲಿ ಏನಿದೆ?:

ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ನೋಂದಣಿ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಪಡೆಯದೆ ಯಾವುದೇ ಸಾಲವನ್ನು ಮಂಜೂರು ಮಾಡುವಂತಿಲ್ಲ ಮತ್ತು ಯಾವುದೇ ಸಾಲವನ್ನು ವಸೂಲು ಮಾಡುವಂತೆಯೂ ಇಲ್ಲ. ಸಾಲ ನೀಡುವ ಸಂಸ್ಥೆಗಳು ನಿಯಮಬಾಹಿರವಾಗಿ ನಡೆದುಕೊಂಡರೆ ಅಂತಹ ಸಂಸ್ಥೆಗಳನ್ನು ರದ್ದುಗೊಳಿಸಬಹುದು. ಆದರೆ, ಅವುಗಳ ಅಹವಾಲುಗಳನ್ನು ಆಲಿಸಲು ಅವಕಾಶ ನೀಡಬೇಕು.
ಸಂಸ್ಥೆಗಳ ಅಹವಾಲು ಆಲಿಸದೆ ನೋಂದಣಿ ರದ್ದು ಮಾಡುವಂತಿಲ್ಲ. ಸಾಲ ನೀಡುವ ಸಂಸ್ಥೆಗಳು ಅಥವಾ ಲೇವಾದೇವಿದಾರರು ಭದ್ರತೆಯನ್ನು ಕೋರುವಂತಿಲ್ಲ. ಸಾಲ ನೀಡುವ ವೇಳೆ ವಿಧಿಸುವ ಬಡ್ಡಿ ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಾಲಗಾರರೊಂದಿಗಿನ ಎಲ್ಲಾ ಪತ್ರ ವ್ಯವಹಾರಗಳು ಕನ್ನಡದಲ್ಲಿರಬೇಕು. ಷರತ್ತುಗಳು ಅರ್ಥಪೂರ್ಣವಾಗಿದ್ದು, ಸಾಲಗಾರನು ಸೂಕ್ತ ನಿರ್ಧಾರ ಕೈಗೊಳ್ಳುವ ರೀತಿಯಲ್ಲಿರಬೇಕು. ಸ್ಥಳೀಯ ಪ್ರದೇಶದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರಬೇಕು ಎಂದು ಉದ್ದೇಶಿತ ಕಾಯ್ದೆಯಲ್ಲಿ ಹೇಳಲಾಗಿದೆ.

ರಾಜ್ಯಪಾಲರು ಕೊಟ್ಟಿರುವ ಸಲಹೆ ಏನು..?

  • ಆರ್‌ಬಿಐ ಅಡಿ ನೋಂದಣಿಯಾದ ಹಣಕಾಸು ಕಂಪನಿಗಳನ್ನು ಸುಗ್ರೀವಾಜ್ಞೆ ವ್ಯಾಪ್ತಿಗೆ ತರಬಾರದು
  • ಕಾನೂನು ರೀತಿ ನೋಂದಣಿಯಾಗಿರುವ ಸಂಸ್ಥೆಗಳಿಗೆ ಈ ಸುಗ್ರೀವಾಜ್ಞೆ ತೊಂದರೆ ಮಾಡಬಾರದು
  • ಪ್ರಾಮಾಣಿಕವಾಗಿ ಸಾಲ ಕೊಟ್ಟವರು ಬಡ್ಡಿಸಹಿತ ವಸೂಲು ಮಾಡಲು ಮುಂಜಾಗ್ರತೆ ವಹಿಸಬೇಕು
  • ಇಲ್ಲದಿದ್ದರೆ ಬಾಕಿ ಸಾಲ ಪಡೆಯಲು ತೊಂದರೆಯಾಗಿ, ಕಾನೂನು ಹೋರಾಟಗಳು ನಡೆಯಬಹುದು
  • ವಿವಾದ ಸೃಷ್ಟಿಯಾದರೆ ಇತ್ಯರ್ಥಕ್ಕೆ ಸಾಲಗಾರ- ಲೇವಾದೇವಿದಾರನ ನಡುವೆ ಒಂಬುಡ್ಸ್‌ಮನ್‌ ಇರಲಿ
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!