ಮಂಡ್ಯ : ಮೈಕ್ರೋ ಫೈನಾನ್ಸ್ ಕಾಟದಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯಂತು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಫೈನಾನ್ಸ್ ಕಿರುಕುಳದಿಂದ ವಿಷದ ಮಾತ್ರೆ ನುಂಗಿ ಕೆಲವು ದಿನದ ಹಿಂದೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ದುರಂತವದೆಂದರೆ ಇದೀಗ ಅವರ ಮಗ ಕೂಡಾ ಪ್ರಾಣ ಕಳೆದುಕೊಂಡಿದ್ದಾನೆ.
ಈ ಘಟನೆ ನಡೆದಿರೋದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದಲ್ಲಿ. ರಂಜಿತ್(೩೧) ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ವ್ಯಕ್ತಿ. ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ತಾಯಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಬಳಿಕ ಮಾನಸಿಕವಾಗಿ ನೊಂದಿದ್ದ ಮಗ ರಂಜಿತ್ ಮನೆಬಿಟ್ಟು ಹೋಗಿದ್ದ. ಹುಡುಕಾಟ ನಡೆಸಿದರೂ ಎಲ್ಲೂ ಸಿಕ್ಕಿರಲಿಲ್ಲ. ಇದೀಗ ಹಲಗೂರು ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ತಾಯಿ ಪ್ರೇಮ ಆತ್ಮಹತ್ಯೆ ಮಾಡಿಕೊಂಡ ದಿನವೇ ರಂಜಿತ್ ಮೃತಪಟ್ಟಿರುವ ಸಾಧ್ಯತೆಯಿದೆ.
ಮೈಕ್ರೋ ಫೈನಾನ್ಸ್ ಕಂಪನಿ ಮನೆ ಸೀಜ್ ಮಾಡಿದ್ದಕ್ಕೆ ಪ್ರೇಮ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ರಂಜಿತ್ ಅಂಗ ವೈಕಲ್ಯದಿಂದ ಬಳಲುತ್ತಿದ್ದು, ತಾಯಿಯೇ ಆರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪ್ರೇಮಾ ಪತಿ ಕೂಡಾ ಅನಾರೋಗ್ಯ ಪೀಡಿತನಾಗಿದ್ದು, ಆಶ್ರಯ ಇಲ್ಲದಂತಾಗಿದೆ. ಸದ್ಯಕ್ಕೆ ಮಗಳು ತಂದೆಯ ಜವಾಬ್ದಾರಿ ಹೊತ್ತುಕೊಂಡಿದ್ದಾಳೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತು ತಾಯಿ ಆತ್ಮಹತ್ಯೆ – ಮನನೊಂದು ಕೆರೆಗೆ ಹಾರಿ ಪ್ರಾಣಬಿಟ್ಟ ಮಗ..!
RELATED ARTICLES