ಬೆಂಗಳೂರು : ಬಿಜೆಪಿಯಲ್ಲಿನ ಬಣ ಬಡಿದಾಟ ಶಮನಕ್ಕೆ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರು ಬಂದು ಕೋರ್ ಕಮಿಟಿ ಸಭೆ ನಡೆಸಿದ್ದಾರೆ. ಆದ್ರೆ ಈ ಸಭೆಗೆ ಅನೇಕ ನಾಯಕರು ಗೈರಾಗಿದ್ದರು.
ಈ ನಡುವೆ ರಾಧಾಮೋಹನ್ ಬಂದು ಹೋದ ಬಳಿಕ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಖುದ್ದು ಉಸ್ತುವಾರಿ ವಿರುದ್ಧವೇ ಮಾಜಿ ಸಚಿವ ಶ್ರೀರಾಮುಲು ಸಿಡಿದೆದ್ದಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನಮಂತು ಸೋಲಿಗೆ ಶ್ರೀರಾಮುಲು ಕಾರಣ ಅಂತ ಸಭೆಯಲ್ಲಿ ಅಗರ್ವಾಲ್ ಹೇಳಿದ್ದಾರೆ. ಇದು ರಾಮುಲು ಅವರನ್ನ ಕೆರಳಿಸಿದ್ದು, ಅಲ್ಲಿಯೇ ತಿರುಗೇಟು ನೀಡಿದ್ದಾರೆ. ನಾನು ಪಕ್ಷಕ್ಕಾಗಿ, ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ್ದೇನೆ. ನೀವು ಯಾಕೆ ಈ ರೀತಿ ಆರೋಪಿಸುತ್ತಿದ್ದೀರಿ ಅಂತ ಮರುಪ್ರಶ್ನೆ ಹಾಕಿದ್ದಾರೆ. ಇದನ್ನ ಕಂಡು ಸಭೆಯಲ್ಲಿದ್ದವರೂ ಶಾಕ್ ಆಗಿದ್ದಾರೆ. ನನ್ನಿಂದ ಪಕ್ಷಕ್ಕೆ ತೊಂದರೆಯಾಗಿದ್ರೆ ಪಕ್ಷ ಬಿಟ್ಟು ಹೋಗೋದಕ್ಕೂ ನಾನು ಸಿದ್ಧ ಅಂತ ಖಂಡಾತುಂಡವಾಗಿ ರಾಮುಲು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಜನಾರ್ಧನ ರೆಡ್ಡಿ ಅವರ ದೂರನ್ನು ಕೇಳಿ ನನ್ನ ವಿರುದ್ಧ ಅಗರ್ವಾಲ್ ಈ ರೀತಿ ಆರೋಪ ಮಾಡಿದ್ದಾರೆ. ಎಲ್ಲರ ಎದುರು ನನಗೆ ಅವಮಾನ ಮಾಡಿದ್ದಾರೆ. ಒಂದು ರೀತಿಯಲ್ಲಿ ಕಸದಂತೆ ನಮ್ಮನ್ನ ಕಾಣ್ತಿದ್ದಾರೆ ಅಂತ ಕೆಂಡಾಮಂಡಲರಾಗಿದ್ದಾರೆ.
ನಾನು ಪಕ್ಷಕ್ಕಾಗಿ ಏನು ಮಾಡಿದ್ದೇನೆ ಅನ್ನೋದನ್ನ ರಾಜ್ಯದ ಬಿಜೆಪಿ ನಾಯಕರು ನೋಡಿದ್ದಾರೆ. ಆದರೆ ಯಾರೊಬ್ಬರೂ ನನ್ನ ಬೆಂಬಲಕ್ಕೆ ಸಭೆಯಲ್ಲಿ ಬರಲಿಲ್ಲ. ವಿಜಯೇಂದ್ರ ಜೊತೆಗೆ ನಾನು ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ಅವರು ಕೂಡಾ ನನ್ನ ಬೆಂಬಲಿಸಲಿಲ್ಲ ಎಂದ ಶ್ರೀರಾಮುಲು, ಸದ್ಯಕ್ಕೆ ನಾನು ಪಕ್ಷ ಬಿಡೋದಿಲ್ಲ. ನಿನ್ನೆ ಆಕ್ರೋಶದಲ್ಲಿ ಆ ಮಾತು ಹೇಳಿದ್ದೆ. ನಾನು ಪಕ್ಷ ಬಿಡುವ ಸಂದರ್ಭ ಬಂದರೆ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ, ಬಳಿಕ ರಾಜೀನಾಮನೆ ನೀಡುತ್ತೇನೆ ಎಂದಿದ್ದಾರೆ.