ಬೆಂಗಳೂರು : ರಾಜ್ಯದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷ ಎರಡರಲ್ಲೂ ಪೈಪೋಟಿಗೆ ಬಿದ್ದವರಂತೆ ಅಸಮಾಧಾನಿತರು ಮುಂಚೂಣಿಗೆ ಬರುತ್ತಿದ್ದಾರೆ. ಆಡಳಿತ ಪಕ್ಷದಲ್ಲಿ ಸಿಎಂ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗ್ರಹ ಹೆಚ್ಚಿದ್ದರೆ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ವಿರುದ್ಧ ಬಣ ಸಮರ ನಡೆಯುತ್ತಿದೆ.
ಈ ನಡುವೆ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರಾಗಿದ್ದ ಹಿರಿಯ ಶಾಸಕ ಬಿ.ಆರ್. ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಈಗ ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿಸಿದೆ. ರಾಜೀನಾಮೆ ಪತ್ರವನ್ನು ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದಾರೆ.
ತಾನು ಪ್ರತಿನಿಧಿಸುವ ಆಳಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಯಸಿದ್ದರು. ಸಚಿವ ಸ್ಥಾನ ಸಿಗದೇ ಇರುವ ಕಾರಣಕ್ಕಾಗಿ ಹೆಚ್ಚಿನ ಅನುದಾನ ಸಿಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಕಳೆದ ಬಜೆಟ್ನಲ್ಲೇ ಆಳಂದ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡದೆ ಇರೋದಕ್ಕೆ ಬೇಸರಗೊಂಡಿದ್ದರು. ಜೊತೆಗೆ ಯಾವುದೇ ಮಹತ್ವ ಇಲ್ಲದ ಸಲಹೆಗಾರ ಸ್ಥಾನವನ್ನು ನಾಮಕಾವಸ್ಥೆಗೆ ನಿಭಾಯಿಸುವ ಅಗತ್ಯವಿಲ್ಲ ಅನ್ನುವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭ ಸ್ಥಾನಮಾನ ಸಿಗದೆ ಅಸಮಾಧಾನಿತರಾಗಿದ್ದ ಹಿರಿಯ ಶಾಸಕರಿಗೆ ಸಲಹೆಗಾರ ಸ್ಥಾನ ನೀಡಿ ಸಮಾಧಾನಪಡಿಸಲಾಗಿತ್ತು. ಹಿರಿಯ ಶಾಸಕ ನೆಲೆಯಲ್ಲಿ ಬಿಆರ್ ಪಾಟೀಲ್ ಅವರಿಗೆ ಸಿಎಂ ಅವರ ರಾಜಕೀಯ ಸಲಹೆಗಾರ ಸ್ಥಾನ ಸಿಕ್ಕಿತ್ತು. ಈ ನಡುವೆ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದ ಪಾಟೀಲರು ಈ ಬಾರಿ ರಾಜೀನಾಮೆ ನೀಡಿ ಸುದ್ದಿಯಾಗಿದ್ದಾರೆ. ಇದು ಪಕ್ಷದಲ್ಲಿ ಯಾವ ರೀತಿ ಸಂಚಲನಕ್ಕೆ ಕಾರಣವಾಗುತ್ತೆ ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.
ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡ್ರಾ ಆಳಂದ ಶಾಸಕ – ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ಬಿ.ಆರ್. ಪಾಟೀಲ್..?
RELATED ARTICLES