Saturday, August 2, 2025
!-- afp header code starts here -->
Homebig breakingಮನೆಗೆಲಸದಾಕೆ ಮೇಲೆ ಅತ್ಯಾಚಾರ ಆರೋಪ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

ಮನೆಗೆಲಸದಾಕೆ ಮೇಲೆ ಅತ್ಯಾಚಾರ ಆರೋಪ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಮನೆಗೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೋಷಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಕೆ.ಆರ್ ನಗರದಲ್ಲಿ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣ ಕುರಿತು ಸರ್ಕಾರಿ ಪರ ವಕೀಲರಾಗಿ ಎನ್. ಜಗದೀಶ್, ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ನಳಿನಿ ಮಾಯಾಗೌಡ ಅವರು ವಾದ ಪ್ರತಿವಾದ ಮಂಡಿಸಿದರು. ವಾದ ಪ್ರತಿವಾದದ ಬಳಿಕ ನ್ಯಾ. ಗಜಾನನ ಭಟ್‌ ಅವರ ಪೀಠ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.

ಐಪಿಸಿ ಸೆಕ್ಷನ್ 376 (2) (K), 376 (2) (N) ಅಡಿಯಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಅಲ್ಲದೇ 5 ಲಕ್ಷ ರೂ. ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಸಂತ್ರಸ್ತೆಗೂ 7 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಪ್ರಜ್ವಲ್‌ ರೇವಣ್ಣಗೆ ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಇಂದಿನಿಂದಲೇ ರೇಪಿಸ್ಟ್‌ ಪ್ರಜ್ವಲ್‌ಗೆ ಜೀವನಪರ್ಯಂತ ಶಿಕ್ಷೆ ವಿಧಿಸಿ ಕೋರ್ಟ್‌ ಆದೇಶಿಸಿದೆ.

ಶುಕ್ರವಾರ ದೋಷಿ ಎಂದು ತೀರ್ಪು ಹೊರಬೀಳುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಪ್ರಜ್ವಲ್‌, ಹಾಸನ ಜಿಲ್ಲೆಗೆ ಸಾಕಷ್ಟು ಮಾಡಿದ್ದೇನೆ, ಚುನಾವಣೆಗೆ 6 ದಿನ ಮುಂಚಿತವಾಗಿ ಈ ವಿಡಿಯೋ ರಿಲೀಸ್‌ ಮಾಡಿದ್ದಾರೆ. ನಾನು ಮಹಿಳೆಯ ಅತ್ಯಾಚಾರ ಮಾಡಿದ್ರೆ ಆಕೆಯ ಸಹೋದರಿ ನಮ್ಮ ಮನೇಲಿ ಕೆಲಸ ಮಾಡ್ತಾ ಇದ್ರಾ? ಅಂತ ಕಣ್ಣೀರಿಟ್ಟರು.

ಸಾಕಷ್ಟು ವರ್ಷಗಳ ಹಿಂದೆ ನಡೆದಿದೆ ಅಂತ ಹೇಳಿದ್ದಾರೆ. ವಿಡಿಯೋ ಬಂದ ಮೇಲೆ ಮಹಿಳೆ ಹೊರಗೆ ಬಂದು ದೂರು ನೀಡಿದ್ದಾಳೆ. ನನ್ನ ಕುಟುಂಬವನ್ನೇ ನಾನು ಬಿಟ್ಟಂತೆ ಆಗಿಹೋಗಿದೆ. ಅಪ್ಪ – ಅಮ್ಮನನ್ನ 6 ತಿಂಗಳಿಂದ ನೋಡಿಲ್ಲ. ದೋಷಿ ಅಂತ ಹೇಳಿದ್ದೀರಿ, ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ. ಶಿಕ್ಷೆ ನೀಡುವಾಗ ನನ್ನ ಕುಟುಂಬವನ್ನ ಪರಿಗಣಿಸಿ ಅಂತ ನ್ಯಾಯಾಧೀಶರ ಎದುರು ಪ್ರಜ್ವಲ್‌ ಕಣ್ಣೀರಿಟ್ಟು ಬೇಡಿಕೊಂಡಿದ್ದರು.

ನಂಗೆ ಕುಟುಂಬ ಇದೆ, 6 ತಿಂಗಳಿಂದ ಅಪ್ಪ-ಅಮ್ಮನನ್ನ ಸರಿಯಾಗಿ ನೋಡಿಲ್ಲ. ಪ್ರತಿಬಾರಿಯೂ ಕೋರ್ಟ್‌ಗೆ ಬರ್ತಾ ಇದ್ದೀನಿ. ನನ್ನ ಕುಟುಂಬ ನನ್ನಿಂದ ಸಂಪೂರ್ಣ ದೂರವಾಗಿದೆ. ನಾನು ರಾಜಕೀಯವಾಗಿ ಬೇಗ ಬೆಳೆದಿದ್ದೇ ತಪ್ಪಾಯ್ತು. ಎಸ್‌ಐಟಿ ನಂಬರ್ ನೀಡಿದ್ದರೂ ಯಾರು ದೂರು ನೀಡಲಿಲ್ಲ. ನಾನು ಕಾಲೇಜಿನಲ್ಲಿ ಮೆರಿಟ್ ವಿದ್ಯಾರ್ಥಿ ಆಗಿದ್ದೆ. ನನ್ನನ್ನ ದುರುದ್ದೇಶದಿಂದ ಸಿಲುಕಿಸಿದ್ರು ಅಂತ ಗಳಗಳನೆ ಅತ್ತಿದ್ದರು.

ಏನಿದು ಪ್ರಕರಣ?‌
ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ನಂತರ ವಿಷಯ ಹೊರಗೆ ಬರುತ್ತೆ ಎಂದು ತಿಳಿದು ಸಂತ್ರಸ್ತೆಯನ್ನ ರೇವಣ್ಣ, ಭವಾನಿ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿ ಅಪಹರಿಸಿದ್ದರು. ಬಳಿಕ ಆಕೆಯನ್ನು ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಇದೇ ಅಪಹರಣ ಪ್ರಕರಣದಿಂದಲೇ ರೇವಣ್ಣ ಸೇರಿದಂತೆ 8 ಜನ ಜೈಲಿಗೆ ಹೋಗಿದ್ದರು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಆನಂತರ ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ, ಆಕೆಯ ಹೇಳಿಕೆ ದಾಖಲು ಮಾಡಿ ಪ್ರಕರಣ ದಾಖಲಿಸಿತ್ತು. ಹೇಳಿಕೆಯ ಮೇಲೆ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋವೊಂದು ಪತ್ತೆಯಾಗಿತ್ತು. ಇದು ಪ್ರಕರಣದ ಬಹುದೊಡ್ಡ ಸಾಕ್ಷ್ಯವಾಗಿ ಪರಿಣಮಿಸಿತು. ಕೊನೆಗೆ ಎಫ್‌ಎಸ್‌ಎಲ್‌ ಮೂಲಕ ವಿಡಿಯೋ ತುಣುಕಿನಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದು ಸಾಬೀತಾಗಿತ್ತು.

ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳಿದ್ದ ಪೆನ್ ಡ್ರೈವ್‌ಗಳನ್ನ ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು. ಬಳಿಕ ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನ ಪೊಲೀಸರು ಬಂಧಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!