ಮುಂಬೈ : ಭಾರತದ ಹೆಸರಾಂತ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿದ್ದ ಪದ್ಮವಿಭೂಷಣ ರತನ್ ಟಾಟಾ(86) ಅವರು ವಿಧಿವಶರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾರೆ. 28-12-1937ರಂದು ರತನ್ ಟಾಟಾ ಜನಿಸಿದ್ದರು.
ತಮ್ಮ ಮುತ್ತಜ್ಜ ಸ್ಥಾಪನೆ ಮಾಡಿದ್ದ ಟಾಟಾ ಗ್ರೂಪ್ ಅನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಯಶಸ್ಸು ರತನ್ಟಾ ಟಾಟಾ ಅವರದ್ದು. ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಕೆಮಿಕಲ್ಸ್ ಸೇರಿದಂತೆ ಹಲವು ಉದ್ದಿಮೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವುದರ ಜತೆಗೆ ಲಕ್ಷಾಂತರ ಮಂದಿಗೆ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಿ ಆಸರೆಯಾಗಿದ್ದರು.
ರತನ್ ಟಾಟಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಬಳಿಕ ಅವರ ಚೇತರಿಕೆಗಾಗಿ ಅವರ ಸಂಸ್ಥೆಯ ಉದ್ಯೋಗಿಗಳಾದಿಯಾಗಿ ಕೋಟ್ಯಂತರ ಮಂದಿ ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.