Thursday, March 26, 2026
Homebig breakingಚಿತ್ರದುರ್ಗ ಭೀಕರ ರಸ್ತೆ ದುರಂತ: 9 ಜನ ಸಜೀವ ದಹನ, ಮುಂದುವರೆದ ಮೃತದೇಹಗಳ ಗುರುತು ಪತ್ತೆಗೆ...

ಚಿತ್ರದುರ್ಗ ಭೀಕರ ರಸ್ತೆ ದುರಂತ: 9 ಜನ ಸಜೀವ ದಹನ, ಮುಂದುವರೆದ ಮೃತದೇಹಗಳ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ

ಚಿತ್ರದುರ್ಗ: ಇಡೀ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿಯ ಭೀಕರ ರಸ್ತೆ ಅಪಘಾತದಲ್ಲಿ ಸಜೀವ ದಹನವಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಟ್ರಾವೆಲ್ಸ್ ಬಸ್ ಮತ್ತು ಕಂಟೇನರ್ ಲಾರಿ ನಡುವೆ ಬುಧವಾರ ತಡರಾತ್ರಿ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ವಾಹನಗಳು ಹೊತ್ತಿ ಉರಿದ ಕಾರಣ, ಬಸ್ಸಿನೊಳಗೆ ಸಿಲುಕಿದ್ದ ಪ್ರಯಾಣಿಕರು ಹೊರಬರಲಾರದೆ ಬೆಂಕಿಗಾಹುತಿಯಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೃತರ ಸಂಖ್ಯೆ 9 ಎಂದು ತಿಳಿದುಬಂದಿದ್ದರೂ, ಬಸ್ಸಿನಲ್ಲಿದ್ದ ಹಲವರು ಇನ್ನೂ ಪತ್ತೆಯಾಗದ ಕಾರಣ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಪ್ರಸ್ತುತ ಸ್ಥಳದಲ್ಲಿ ಮೃತದೇಹಗಳ ಪತ್ತೆ ಕಾರ್ಯ ಮತ್ತು ಗುರುತು ಪತ್ತೆ ಹಚ್ಚುವ ಪ್ರಕ್ರಿಯೆ ಮುಂದುವರೆದಿದೆ.

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಚುರುಕಿನಿಂದ ಸಾಗುತ್ತಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸುಟ್ಟು ಕರಕಲಾಗಿರುವ ಬಸ್ಸಿನ ಒಳಗಿನಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಅವುಗಳನ್ನು ಗುರುತಿಸುವುದು ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೃತರ ಗುರುತು ಪತ್ತೆಹಚ್ಚಲು ಬೆಂಗಳೂರಿನಿಂದ ಫೋರೆನ್ಸಿಕ್ ತಜ್ಞರು ಮತ್ತು ಡಿಎನ್‌ಎ (DNA) ತಂಡಗಳು ಸ್ಥಳಕ್ಕೆ ಆಗಮಿಸಿವೆ. ಡಿಎನ್‌ಎ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಮೃತರ ಅಧಿಕೃತ ಹೆಸರು ಮತ್ತು ವಿವರಗಳು ಲಭ್ಯವಾಗಲಿವೆ ಎಂದು ಐಜಿಪಿ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.

ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವವರನ್ನು ಹಿರಿಯೂರು ಮತ್ತು ಶಿರಾದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ. ಬಸ್ಸಿನಲ್ಲಿ ಒಟ್ಟು 29 ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದ್ದು, ಈ ಪೈಕಿ ಕೆಲವರು ಕಿಟಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಲಾರಿ ಚಾಲಕನ ಅತಿಯಾದ ವೇಗ ಮತ್ತು ನಿಯಂತ್ರಣ ತಪ್ಪಿ ಡಿವೈಡರ್ ದಾಟಿದ್ದೇ ಈ ಭೀಕರ ಘಟನೆಗೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!