ಬೆಂಗಳೂರು: ಐಟಿ ದಾಳಿಗೆ ಹೆದರಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ (CJ Roy) ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಲ್ಯಾಂಡ್ ಫರ್ಡ್ ರಸ್ತೆಯಲ್ಲಿ ನಡೆದಿದೆ.
ಇಂದು (ಜ.30) ಕಾನ್ಫಿಡೆಂಡ್ ಗ್ರೂಪ್ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ರೀತಿ ಕಳೆದ ಮೂರು ವರ್ಷಗಳಿಂದ ಐಟಿ ದಾಳಿ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಉದ್ಯಮಿ ಇಂದು ದಾಳಿ ವೇಳೆ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿ.ಜೆ.ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನ ಹುಟ್ಟುಹಾಕಿದ್ದರು. ಪದೇ ಪದೇ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ IT ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್ನಿಂದ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
IT ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಕೂಡ ದಾಳಿ ಮಾಡಿದ್ದರು. ಎರಡು ಇನ್ನೋವಾ ಕಾರುಗಳಲ್ಲಿ 8 ಜನರ ಅಧಿಕಾರಿಗಳ ತಂಡ ಬಂದಿತ್ತು. ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, 1 ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ. ಮತ್ತಷ್ಟು ದಾಖಲೆ ತರಲು ರೂಮ್ಗೆ ಹೋಗಿದ್ದಾರೆ. ಈ ವೇಳೆ ಪಿಸ್ತೂಲ್ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಒಂದು ಸುತ್ತು ಗುಂಡು ಹಾರಿಸಿಕೊಳ್ಳುತ್ತಿದ್ದಂತೆ ಗನ್ ಕಿತ್ತುಕೊಂಡಿರುವ ಐಟಿ ಅಧಿಕಾರಿಗಳು, ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ ರಾಯ್. ಹೆಚ್ಎಸ್ಆರ್ ಲೇಔಟ್ ನಾರಾಯಣ ಆಸ್ಪತ್ರೆಗೆ ಮೃತದೇಹ ಶಿಫ್ಟ್ ಮಾಡಲಾಗಿದೆ.
ಕಾನ್ಫಿಡೆಂಟ್ ಗ್ರೂಪ್ ಕೇವಲ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಡಾ. ರಾಯ್ ಅವರ ಬಹುಮುಖ ಪ್ರತಿಭೆ ಮತ್ತು ಆಸಕ್ತಿಗಳು ಸಂಸ್ಥೆಯನ್ನ ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಲು ಕಾರಣವಾಗಿವೆ. ಮಲಯಾಳಂ ಮತ್ತು ಕನ್ನಡದಲ್ಲಿ 11 ಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಮರಕ್ಕಾರ್’ ಎಂಬ ಅತಿ ದೊಡ್ಡ ಬಜೆಟ್ನ ಮಲಯಾಳಂ ಚಿತ್ರವನ್ನು ಸಹ ನಿರ್ಮಿಸಿದ್ದಾರೆ. 2006 ರಲ್ಲಿ, ‘ಐಡಿಯಾ ಸ್ಟಾರ್ ಸಿಂಗರ್’ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆ ಹಣಕಾಸು ಒದಗಿಸುವ ಮೂಲಕ ಕಾನ್ಫಿಡೆಂಟ್ ಗ್ರೂಪ್ ಅನ್ನು ಪ್ರಚಾರ ಮಾಡುವ ಅವರ ಆಲೋಚನೆ ಯಶಸ್ವಿಯಾಗಿತ್ತು.
