ಚಿಕ್ಕಮಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಿ.ಟಿ ರವಿ ಹಾಗೂ ಎಸ್.ಎಲ್ ಭೋಜೇಗೌಡ್ರು ಇಬ್ಬರು ಭರ್ಜರಿ ಜಯ ಸಾಧಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಸಿ.ಟಿ ರವಿ ಅವರಿಗೆ 27 ಮತಗಳು ದಕ್ಕಿದ್ರೆ, ಎಸ್.ಎಲ್ ಭೋಜೇಗೌಡ್ರು 30 ಮತಗಳನ್ನ ಪಡೆಯುವ ಮೂಲಕ ಮೈತ್ರಿಗೆ ಯಾವ ಭಂಗ ಇಲ್ಲ ಅನ್ನೋದನ್ನ ಸಾರಿದ್ದಾರೆ.
ಇನ್ನೂ ಬಿಜೆಪಿಯಿಂದಲೇ ಬಂಡಾಯ ಅಭ್ಯರ್ಥಿ ರೀತಿ, ಪಕ್ಷದ ಆದೇಶ ದಿಕ್ಕರಿಸಿ ಸ್ಪರ್ಧಿಸಿದ್ದ ನಿರಂಜನ್ ಅವರು ಕೇವಲ 5 ಮತಗಳನ್ನ ಪಡಯಲ್ಲಷ್ಟೇ ತೃಪ್ತರಾಗಿದ್ದಾರೆ. ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದ 2 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 32 ಮತದಾರರು ಮತ ಚಲಾಯಿಸಿದ್ರು. ಇಬ್ಬರು ಪರಿಷತ್ ಸದಸ್ಯರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಪ್ರತಿಷ್ಠೆಯ ಕಣವಾಗಿ ಮಾರ್ಪಟಿತ್ತು. ರೆಬೆಲ್ ಕ್ಯಾಂಡೇಟ್ ನಿರಂಜನ್ ಏನಾದ್ರೂ ಮ್ಯಾಜಿಕ್ ಮಾಡಬಹುದಾ ಅನ್ನೋ ಲೆಕ್ಕಾಚಾರ ಹಾಕಲಾಗಿತ್ತು. ಆದ್ರೆ ಆ ರೀತಿಯ ಯಾವುದೇ ಮ್ಯಾಜಿಕ್ ಈ ಚುನಾವಣೆಯಲ್ಲಿ ನಡೆಯಲಿಲ್ಲ. ಸಿ.ಟಿ ರವಿ ಹಾಗೂ ಭೋಜೇಗೌಡರ ಗೆಲುವಿನ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು.
ಡಿಸಿಸಿ ಬ್ಯಾಂಕ್ ಚುನಾವಣೆಯನ್ನ ಕ್ಲೀನ್ ಸ್ವೀಪ್ ಮಾಡಿದ NDA ಮೈತ್ರಿಕೂಟ
13 ನಿರ್ದೇಶಕರಲ್ಲಿ 11 ಬಿಜೆಪಿ, 2 ಜೆಡಿಎಸ್ ನಿಂದ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಹಾಲಿ ಕಾಂಗ್ರೆಸ್ ಶಾಸಕ ಕೆ.ಎಸ್ ಆನಂದ್ ಅವರಿಗೆ ಮುಖಭಂಗ ಆಗಿದೆ. ಕೊಪ್ಪದ ಬಿಜೆಪಿ ಮುಖಂಡ, ಕಡೂರಿನ ಹಾಲಿ ಕೈ ಶಾಸಕರನ್ನ ಸೋಲಿಸೋ ಮೂಲಕ ಮರ್ಮಾಘಾತ ನೀಡಿದ್ದಾರೆ. ವ್ಯವಸಾಯೋತ್ಪನ್ನ ಸಹಕಾರ ಸಂಘದಿAದ ಕಡೂರಿನ ಶಾಸಕ ಕೆ.ಎಸ್ ಆನಂದ್ ಸ್ಪರ್ಧೆ ಮಾಡಿದ್ರು. ಇನ್ನೂ ಮೂಡಿಗೆರೆಯ ಮಾಜಿ ಶಾಸಕ, ಹಾಲಿ ಕೈ ಮುಖಂಡ ಎಂ.ಪಿ ಕುಮಾರಸ್ವಾಮಿ ಅವರನ್ನ ತರೀಕೆರೆಯ ರಮೇಶ್ ಟಿ.ಎಲ್ ಅವರು ಸೋಲಿಸಿದ್ದಾರೆ. ಎಂ.ಪಿ ಕುಮಾರಸ್ವಾಮಿ ಪ್ರಾಥಮಿಕ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳ ಸಹಕಾರ ಸಂಘದಿಂದ ಸ್ಪರ್ಧೆ ಮಾಡಿದ್ರು.
ಒಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 5ಕ್ಕೆ 5 ಕ್ಷೇತ್ರಗಳಲ್ಲಿ ಕೈ ಶಾಸಕರಿದ್ರೂ ಕೇವಲ ಒಂದೇ ಒಂದು ಸ್ಥಾನವನ್ನ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಡೆಯಲಾಗದೇ ತೀವ್ರ ಮುಖಭಂಗ ಅನುಭವಿಸಿದೆ. ಅಲ್ಲದೇ ಹಾಲಿ-ಮಾಜಿ ಶಾಸಕರು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿರೋದು, ಕಾಂಗ್ರೆಸ್ ಗೆ ದೊಡ್ಡ ಹೊಡೆತ ನೀಡಿದ್ರೆ, ಈ ಮೈತ್ರಿ ಮಂತ್ರದಿಂದ ದಿಗ್ವಿಜಯ ಸಾಧಿಸಿರೋ ಬಿಜೆಪಿ-ಜೆಡಿಎಸ್, ಮುಂದೈತೆ ಮಾರಿಹಬ್ಬ ಅನ್ನೋ ಸ್ಪಷ್ಟ ಸೂಚನೆಯನ್ನ ಕಾಂಗ್ರೆಸ್ ಗೆ ನೀಡಿರೋದಂತೂ ಸುಳ್ಳಲ್ಲ.
