ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಎರಡು ತಿಂಗಳು ಕಳೆದಿದೆ. ಜೈಲೊಳಗೆ ದರ್ಶನ್ ಹೇಗಿದ್ದಾರೆ ಅನ್ನೋದು ಈವರೆಗೆ ಗೊತ್ತಾಗಿರಲಿಲ್ಲ. ಕೇವಲ ಅಂತೆಕಂತೆಗಳ ಸುದ್ದಿಗಳೇ ಹರಿದಾಡುತ್ತಿದ್ದವು ಅಷ್ಟೇ…
ಆದರೆ ಈಗ ಜೈಲ್ ಒಳಗಿರುವ ಫೋಟೋ ಒಂದು ಹೊರಬಂದಿದ್ದು, ಜೈಲೊಳಗೆ ರಾಜಾತಿಥ್ಯ ಸಿಗ್ತಿದ್ಯಾ ಅನ್ನುವ ಅನುಮಾನಕ್ಕೆ ಹುಟ್ಟುಹಾಕಿದೆ.
ಜೈಲಿನಲ್ಲಿರುವ ತನ್ನ ಬ್ಯಾರಕ್ ಹೊರಭಾಗದಲ್ಲಿ ಕುಳಿತು ಹರಟುತ್ತಿರುವ ಫೋಟೋ ಒಂದು ಹೊರಬಂದಿದ್ದು, ಎಡಗೈನಲ್ಲಿ ಸಿಗರೇಟ್, ಬಲಗೈನಲ್ಲಿ ಕಪ್‌ನಲ್ಲಿ ಏನೋ ಕುಡಿಯುತ್ತಿರುವ ಭಂಗಿಯಲ್ಲಿದೆ. ದರ್ಶನ್ ಜತೆಗೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಮ್ಯಾನೇಜರ್ ನಾಗರಾಜ್ ಹಾಗೂ ಕುಳ್ಳ ಸೀನ ಕುಳಿತಿದ್ದಾನೆ. ಜೈಲ್‌ನಲ್ಲಿರುವ ಕೈದಿ ವೇಲು ಎಂಬಾತ ಈ ಫೋಟೋ ಕ್ಲಿಕ್ ಮಾಡಿ ತನ್ನ ಪತ್ನಿಗೆ ಕಳುಹಿಸಿದ್ದ ಅಂತ ಹೇಳಲಾಗ್ತಿದೆ ಅಂತ ರಾಜ್ಯ ಮಾಧ್ಯಮಗಳಲ್ಲಿ ಸುದ್ದಿಯಾಗ್ತಿದೆ. ಅದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಜತೆಗೆ ಸೈಲ್‌ನ ಸಿಸ್ಟಂ ಬಗ್ಗೆಯೇ ಜನ ಅನುಮಾನಪಡುವಂತೆ ಮಾಡಿದೆ.
ಜೈಲಲ್ಲಿ ಆಹಾರ ಸರಿಯಿಲ್ಲ, ತೂಕ ಇಳಿದು ಹೋಗಿದೆ, ಮನೆ ಆಹಾರ ಬೇಕು ಅಂತೆಲ್ಲ ಕೋರ್ಟ್ ಮೊರೆ ಹೋಗಿದ್ದ ದರ್ಶನ್‌ಗೆ ಸಿಗರೇಟ್ ಕೊಟ್ಟವರ್ಯಾರು?, ಅಲ್ಲಿನ ಕೈದಿಗಳಿಗೆ ರಾಜಾರೋಷವಾಗಿ ಮೊಬೈಲ್ ಬಳಸೋದಕ್ಕೆ ಅವಕಾಶ ಮಾಡಿಕೊಟ್ಟವರು ಯಾರು ಎಂಬ ಪ್ರಶ್ನೆ ಎದ್ದಿದೆ. ಈ ಫೋಟೋ ನೋಡಿದಾಗ ಇದು ಜೈಲಿನ ಚಿತ್ರಣ ಅಂತ ಅನ್ನಿಸುತ್ತಿಲ್ಲ. ಯಾವ್ದೋ ರೆಸಾರ್ಟ್‌ನಲ್ಲಿ ಕುಳಿತು ಹರಟುತ್ತಿರುವಂತಿದೆ. ಇದಕ್ಕೆಲ್ಲ ಗೃಹ ಸಚಿವರು, ಜೈಲು ಅಧಿಕಾರಿಗಳು ಏನ್ ಹೇಳ್ತಾರೆ ಅಂತ ಜನ ಕೇಳ್ತಿದ್ದಾರೆ.

