ಪಬ್ಲಿಕ್ ಇಂಪ್ಯಾಕ್ಟ್ ಸಕಲೇಶಪುರ : ಮಲೆನಾಡು ಭಾಗದಿಂದ ಬಯಲು ಸೀಮೆಗೆ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವೇನಿಲ್ಲ ಇಲ್ಲಿಯ ಜನರು ಭೂಮಿ ಕಳೆದುಕೊಂಡಿದ್ದರು ಸಹ ಯಾವುದೇ ತೊಂದರೆ ಮಾಡದೆ ಸಂತೋಷದಿಂದ ನೀರು ಕೊಡಲು ಅವಕಾಶ ನೀಡಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 500 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೋರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅನುದಾನದಲ್ಲಿ ನಮಗೆ ತಾರತಮ್ಯವಾಗುತ್ತಿದೆ. ನೀರು ನೀಡುತ್ತಿರುವ ಈ ಪ್ರದೇಶದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಅನುದಾನದ ವಿಚಾರದಲ್ಲಿ ಸರ್ಕಾರ ಕೂಡ ಸಂತೋಷವಾಗಿ ಅನುದಾನ ನೀಡಬೇಕು. ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ರಾಜ್ಯದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಂತರ್ಜಲ ಮರುಪೂರಣಕ್ಕಾಗಿ ಕೈಗೆತ್ತಿಕೊಂಡಿರುವ ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು ನಿರ್ಣಾಯಕ ಘಟ್ಟ ತಲುಪಿದ್ದು, ಮೊದಲನೇ ಹಂತದ ಏತ ಕಾಮಗಾರಿಗಳ ಯಶಸ್ವಿ ಪೂರ್ವ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಲಾಗಿದೆ ಅಂತ ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಎತ್ತಿನಹೊಳೆ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದ ಹಲವೆಡೆ ಭೂಕುಸಿತವಾಗಿದ್ದು ಸಾಕಷ್ಟು ನಷ್ಟ ಉಂಟಾಗಿದರೂ ಇದುವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ರಸ್ತೆ, ಕಾಫಿ ತೋಟ ಏಲಕ್ಕಿ, ಮೆಣಸು ಸೇರಿದಂತೆ ಬತ್ತದ ಗದ್ದೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಹಲವು ಗ್ರಾಮಗಳಲ್ಲಿ ಸಾವಿರಾರು ವಿದ್ಯುತ್ ಕಂಬಗಳು ಮುರಿದ್ದು ಬಿದ್ದಿದ್ದು ಕಾಡಂಚಿನ ಗ್ರಾಮಗಳಲ್ಲಿ ಕಗ್ಗತ್ತಲಲ್ಲಿ ವಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಭಾಗದ ಬೆಳೆಗಾರರು, ರೈತರ ಹಾಗೂ ಸಾರ್ವಜನಿಕರ ಬದುಕು ಮೂರಾಬಟ್ಟೆಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಎತ್ತಿನಹೊಳೆ ಯೋಜನೆಯ ಬಾಧಿತ ಪ್ರದೇಶದಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ನಷ್ಟವಾಗಿದ್ದು ತಕ್ಷಣಕ್ಕೆ ಸರಕಾರ ಕನಿಷ್ಠ 500 ಕೋಟಿ ರೂ ರುಗಳ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಿದರು.

