ಬಹ್ರೇಚ್(ಉತ್ತರ ಪ್ರದೇಶ) : ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ತೋಳಗಳ ಹಾವಳಿ ಮಿತಿ ಮೀರಿದ್ದು, ಇಂದು ಎರಡು ವರ್ಷದ ಮಗುವನ್ನು ಕೊಂದು ಹಾಕಿದೆ.
ತೋಳಗಳ ದಾಳಿಯಿಂದ ಹಳ್ಳಿಗಾಡಿನ ಜನರು ಭಯದಲ್ಲೇ ದಿನದೂಡುವಂತಾಗಿದೆ. ಸೋಮವಾರ ನಸುಕಿನ ಜಾವ 3.55ರ ವೇಳೆಗೆ ಕೂಲಿ ಕಾರ್ಮಿಕ ಕುಟುಂಬದ ಗುಡಿಸಲಿಗೆ ನುಗ್ಗಿದ ತೋಳ ಅಂಜಲಿ ಎಂಬ ಬಾಲಕಿಯನ್ನು ಎಳೆದೊಯ್ದು ಕೊಂದು ಹಾಕಿದೆ. ಜತೆಗಿದ್ದ ಆರು ತಿಂಗಳ ಮಗು ಅತ್ತಾಗ ಎಚ್ಚರವಾಗಿ ಮನೆಯವರು ನೋಡಿದಾಗ ದೊಡ್ಡ ಮಗಳನ್ನು ಎಳೆದೊಯ್ದಿರುವುದು ಗಮನಕ್ಕೆ ಬಂದಿದೆ. ಬಳಿಕ ಗ್ರಾಮಸ್ಥರೆಲ್ಲರು ಸೇರಿ ಹುಡುಕಾಡಿದ್ದು, ಹೊರವಲಯದಲ್ಲಿ ಮೃತದೇಹ ಸಿಕ್ಕಿದೆ.
ಈವರೆಗೆ 4 ತೋಳಗಳನ್ನು ಸೆರೆಹಿಡಿದಿದ್ದು, ಇನ್ನೂ ತೋಳಗಳು ಗ್ರಾಮದಲ್ಲಿರುವುದು ಗೊತ್ತಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.
ಈವರೆಗೆ 17 ಬಾರಿ ತೋಳ ದಾಳಿ ಮಾಡಿದ್ದು. 6 ಮಕ್ಕಳು ಸೇರಿದಂತೆ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
