Monday, February 9, 2026
Homebig breakingHate Speech Bill; ಪ್ರತಿಪಕ್ಷಗಳ ಭಾರಿ ಗದ್ದಲದ ನಡುವೆಯೇ ದ್ವೇಷ ಭಾಷಣ ತಡೆ ಮಸೂದೆ ಅಂಗೀಕಾರ!

Hate Speech Bill; ಪ್ರತಿಪಕ್ಷಗಳ ಭಾರಿ ಗದ್ದಲದ ನಡುವೆಯೇ ದ್ವೇಷ ಭಾಷಣ ತಡೆ ಮಸೂದೆ ಅಂಗೀಕಾರ!

ಬೆಳಗಾವಿ: ರಾಜ್ಯ ಸರ್ಕಾರ ಗುರುವಾರ ದ್ವೇಷದ ರಾಜಕಾರಣ ಮತ್ತು ಸಮಾಜದಲ್ಲಿ ಅಶಾಂತಿ ಹರಡುವ ಭಾಷಣಗಳಿಗೆ ಬ್ರೇಕ್ ಹಾಕಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025’ ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಈ ಮೂಲಕ ದ್ವೇಷ ಭಾಷಣ ತಡೆಗೆ ಪ್ರತ್ಯೇಕ ಕಾನೂನು ರೂಪಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.

ಸದನದಲ್ಲಿ ಭಾರಿ ಹೈಡ್ರಾಮಾ: ಪ್ರತಿ ಹರಿದು ಆಕ್ರೋಶ!

ಮಸೂದೆ ಅಂಗೀಕಾರವಾಗುತ್ತಿದ್ದಂತೆ ವಿಧಾನಸಭೆಯು ರಣಾಂಗಣವಾಗಿ ಮಾರ್ಪಟ್ಟಿತ್ತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಸೂದೆಯ ಪ್ರತಿಯನ್ನು ಹರಿದು ಗಾಳಿಯಲ್ಲಿ ತೂರಿದರಲ್ಲದೆ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಸಚಿವ ಬೈರತಿ ಸುರೇಶ್ ಮತ್ತು ಬಿಜೆಪಿ ಶಾಸಕ ಚನ್ನಬಸಪ್ಪ ನಡುವೆ ಏಕವಚನದಲ್ಲಿ ತೀವ್ರ ವಾಕ್ಸಮರ ನಡೆಯಿತು. “ಕರಾವಳಿ ಕರ್ನಾಟಕಕ್ಕೆ ನೀವೇ ಬೆಂಕಿ ಹಚ್ಚಿದ್ದೀರಿ” ಎಂಬ ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಸದನವನ್ನು ಕೆಲಕಾಲ ಮುಂದೂಡಿದರು.

ದ್ವೇಷ ಭಾಷಣ ಮಸೂದೆಯಲ್ಲೇನಿದೆ?
ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಜೀವಂತ, ಮೃತ ವ್ಯಕ್ತಿಗಳ ಬಗ್ಗೆ ಮತ್ತು ಯಾವುದೇ ಗುಂಪಿನ ವಿರುದ್ಧ ದ್ವೇಷದ ಭಾವನೆ ಮೂಡಿಸುವಂತೆ ಆಡುವ ಮಾತು, ಬರೆಯುವ ಲೇಖನ ಅಥವಾ ಪ್ರಸಾರ ಮಾಡುವ ವಿಡಿಯೋಗಳನ್ನು ದ್ವೇಷ ಭಾಷಣ ಎಂದು ಪರಿಗಣಿಸಲಾಗುತ್ತದೆ. ಈ ಹೊಸ ಕಾನೂನಿನ ಪ್ರಕಾರ ಧರ್ಮ, ಜಾತಿ, ಜನಾಂಗ, ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟು ಹಿನ್ನೆಲೆಯನ್ನು ಆಧರಿಸಿ ಯಾವುದೇ ರೀತಿಯ ಪಕ್ಷಪಾತ ಅಥವಾ ನಿಂದನೆ ಮಾಡುವುದನ್ನು ಅಪರಾಧವೆಂದು ವರ್ಗೀಕರಿಸಲಾಗಿದೆ.


ದ್ವೇಷ ಭಾಷಣ ಕಾನೂನನ್ನು ಎರಡು ಹಂತಗಳಲ್ಲಿ ವಿಂಗಡಿಸಲಾಗಿದೆ:

  • ಮೊದಲ ಬಾರಿಗೆ ಅಪರಾಧ: ಕನಿಷ್ಠ 1 ವರ್ಷದಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ.
  • ಅಪರಾಧ ಪುನರಾವರ್ತನೆಯಾದರೆ:ಕನಿಷ್ಠ 2 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಜೈಲು ಮತ್ತು 1 ಲಕ್ಷ ರೂ. ದಂಡ.
  • ಜಾಮೀನು ರಹಿತ ಪ್ರಕರಣ:ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಜಾಮೀನು ರಹಿತವಾಗಿದ್ದು (Non-bailable), ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ವಿಚಾರಣೆ ನಡೆಯಲಿದೆ.

    ತನಿಖೆ ನಡೆಸುವವರು ಯಾರು?
  • ದ್ವೇಷ ಭಾಷಣದ ಪ್ರಕರಣಗಳನ್ನು ಡಿವೈಎಸ್ಪಿ (DySP) ದರ್ಜೆಯ ಅಥವಾ ಅದಕ್ಕಿಂತ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಮಾತ್ರ ತನಿಖೆ ನಡೆಸಬೇಕು. ಅಲ್ಲದೆ, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳಿಗೂ ಈ ಕುರಿತು ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!