ಚಿಕ್ಕಮಗಳೂರು: ಮಲೆನಾಡಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಪಿಕಪ್ ಬಿದ್ದ ಪರಿಣಾಮ ಯುವಕ ಸಾವನ್ನಪ್ಪಿದ ಘಟನೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದ ಬಳಿ ನಡೆದಿದೆ.
ಗಣಪತಿಕಟ್ಟೆ ನಿವಾಸಿ ಶಮಂತ್ (23) ಮೃತ ದುರ್ದೈವಿ. ಭದ್ರಾ ನದಿಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಿಕಪ್ ಸಮೇತ ನದಿಗೆ ಬಿದ್ದು ಯುವಕ ಮೃತಪಟ್ಟಿದ್ದಾನೆ. ಚಾಲಕ ಶಮಂತ್ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದ. ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಹೋಗುವಾಗ ಅವಘಡ ಸಂಭವಿಸಿದೆ
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಿಯುತ್ತಿರುವ ಮಳೆಯಿಂದ ಕಾರ್ಯಾಚರಣೆಗೂ ತೊಂದರೆಯುಂಟಾಗಿದೆ. ಬಾಳೆಹೊನ್ನೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಮುಳುಗು ತಜ್ಞ ಮಲ್ಪೆ ಈಶ್ವರ್ ಅವರನ್ನೂ ಕರೆಸಲು ಸಿದ್ಧತೆ ನಡೆಸಲಾಗುತ್ತಿದೆ.