Advertisement

Homebig breakingಈಶ್ವರ್‌ ಮಲ್ಪೆ, ಮನಾಫ್‌ ವಿರುದ್ಧ ತಿರುಗಿ ಬಿದ್ದ ಕೇರಳದ ಅರ್ಜುನ್‌ ಕುಟುಂಬ..!

ಈಶ್ವರ್‌ ಮಲ್ಪೆ, ಮನಾಫ್‌ ವಿರುದ್ಧ ತಿರುಗಿ ಬಿದ್ದ ಕೇರಳದ ಅರ್ಜುನ್‌ ಕುಟುಂಬ..!

ಕೇರಳ : ಉತ್ತರ ಕನ್ನಡ ಜಿಲ್ಲೆಯ ಶಿರೂರುವಿನಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಸಿಲುಕಿದ್ದ ಕೇರಳ ಮೂಲದ ಅರ್ಜುನ್‌ ಹಾಗೂ ಆತನಿದ್ದ ಲಾರಿಯ ಅವಶೇಷ ಪತ್ತೆಯಾಗಿದೆ. ಅರ್ಜುನ್‌ ಅಂತ್ಯಕ್ರಿಯೆಯೂ ಮುಗಿದಿದೆ. ಆದರೆ ಇದೀಗ ಆ ವಿಚಾರಕ್ಕೆ ಸಂಬಂಧಪಟ್ಟಂತೆ ಅರ್ಜುನ್‌ ಕುಟುಂಬ ಲಾರಿ ಮಾಲೀಕ ಮನಾಫ್‌ ಹಾಗೂ ಉಡುಪಿಯ ಈಜುತಜ್ಞ ಈಶ್ವರ್‌ ಮಲ್ಪೆ ವಿರುದ್ಧ ಸಿಡಿದೆದ್ದಿದ್ದಾರೆ.
72 ದಿನ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮನಾಫ್‌ ಹಾಗೂ ಈಶ್ವರ್‌ ಮಲ್ಪೆ ವಿವಿಧ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಬಗ್ಗೆ ಸಾಕಷ್ಟು ಪ್ರಶಂಸೆಯೂ ಇಬ್ಬರಿಗೆ ವ್ಯಕ್ತವಾಗಿತ್ತು. ಕರ್ನಾಟಕ ಹಾಗೂ ಕೇರಳದ ಮಾಧ್ಯಮಗಳು ಈ ಇಬ್ಬರ ಕುರಿತಾಗಿ ವರದಿಗಳನ್ನೂ ಪ್ರಸಾರ ಮಾಡಿದ್ದವು. ಆದರೆ ಈಗಿನ ಬೆಳವಣಿಗೆಯಲ್ಲಿ ಇಬ್ಬರು ವ್ಯಕ್ತಿಗಳು ಅರ್ಜುನ್‌ ಹೆಸರು ಹೇಳಿಕೊಂಡು ಹಣ ಮಾಡುತ್ತಿದ್ದಾರೆಂಬ ದೊಡ್ಡ ಆರೋಪ ಅರ್ಜುನ್‌ ಕುಟುಂಬದಿಂದ ಕೇಳಿಬಂದಿದೆ.
ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅರ್ಜುನ್ ಸಹೋದರ ಅಭಿಜಿತ್‌, ಸಹೋದರಿಯ ಪತಿ ಜಿತಿನ್‌‌, ಮನಾಫ್‌ ಹಾಗೂ ಈಶ್ವರ್‌ ಮಲ್ಪೆ ವಿರುದ್ಧ ಆಕ್ರೋಶ ಹೊರಹಾಕಿದರು. ಆರಂಭದ ಹಂತದಲ್ಲಿ ಇಬ್ಬರು ಕೂಡಾ ನಮಗೆ ನೆರವಾಗಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಮೂರನೇ ಹಂತದ ಕಾರ್ಯಾಚರಣೆ ಸಂದರ್ಭ ಇಬ್ಬರ ನೈಜ ಮುಖದ ದರ್ಶನವಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಅರ್ಜುನ್‌ ಹೆಸರನ್ನು ಬಳಸಿಕೊಂಡಿದ್ದಾರೆ. ತಮ್ಮಿಬ್ಬರ ಯೂಟ್ಯೂಬ್‌ ಬೆಳವಣಿಗೆಗಾಗಿ ಅಲ್ಲಿನ ಚಿತ್ರಣವನ್ನು ಬಳಸಿಕೊಂಡಿರುವುದು ಗೊತ್ತಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಮನಾಫ್‌ ಬಗ್ಗೆ ಆರಂಭದಿಂದಲೂ ಅಸಮಾಧಾನ ಇತ್ತು. ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದಾರೆ. ಅವರ ವಿರುದ್ಧ ದೂರು ಕೊಡಿ, ನಾವು ಕ್ರಮ ಕೈಗೊಳ್ಳುತ್ತೇವೆಂದು ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ನಮಗೆ ಹೇಳಿದ್ದರು. ಆದರೆ ನಾವು ಅದಕ್ಕೆ ಮನ್ನಣೆ ಕೊಡಲಿಲ್ಲ. ನಂತರದಲ್ಲಿ ಈಶ್ವರ್‌ ಮಲ್ಪೆ ಜತೆ ಸೇರಿಕೊಂಡು ಭಾವನಾತ್ಮಕ ವಿಚಾರಗಳನ್ನು ವೀಡಿಯೋ ಮಾಡಿಕೊಂಡು ಯೂಟ್ಯೂಬ್‌ ವೀಕ್ಷಕರ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಂಡರು. ಶಿರೂರು ದುರಂತದ ನಂತರ ಮನಾಫ್‌ ಕೂಡಾ ಯೂಟ್ಯೂಬ್‌ ಚಾನಲ್‌ ಆರಂಭಿಸಿ, ನಮ್ಮ ವಿಚಾರವನ್ನು ಬಳಸಿಕೊಂಡು ಸಬ್‌ಸ್ಕ್ರೈಬರ್‌ ಹಾಗೂ ವೀಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡ. ಈಶ್ವರ್‌ ಮಲ್ಪೆ ಕೂಡಾ ತಮ್ಮ ಚಾನಲ್‌ನ ಬೆಳವಣಿಗೆಗಾಗಿ ಅರ್ಜುನ್‌ನ ವಿಚಾರಗಳನ್ನು ಬಳಸಿಕೊಂಡರು ಎಂದು ಆರೋಪಿಸಿದರು.
ಮೂರನೇ ಹಂತದ ಕಾರ್ಯಾಚರಣೆ ಬಹಳ ಕಾನ್ಫಿಡೆನ್ಶಿಯಲ್‌ ಆಗಿ ನಡೆಯುತ್ತಿತ್ತು. ಅಲ್ಲಿಗೆ ಈಶ್ವರ್‌ ಮಲ್ಪೆಯ ಅಗತ್ಯತೆ ಇರಲಿಲ್ಲ. ಜಿಲ್ಲಾಡಳಿತ ಕೂಡಾ ಅವರನ್ನು ಕರೆಸಲಿಲ್ಲ. ಅವರಾಗಿಯೇ ಬಂದು ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದರು. ಡ್ರೆಜ್ಜರ್‌ ಸಂಸ್ಥೆಗೆ ಕಾರ್ಯಾಚರಣೆ ಹೇಗೆ ಮಾಡಬೇಕೆಂದು ಗೊತ್ತಿತ್ತು. ಆದರೆ ಈಶ್ವರ್‌ ನಡುವಲ್ಲಿ ಹೋಗಿ ತೊಂದರೆ ಕೊಡುತ್ತಿದ್ದರು. ಹೀಗಾಗಿ ಅಲ್ಲಿನ ಪೊಲೀಸರೇ ಅವರನ್ನು ವಾಪಸ್‌ ಕಳುಹಿಸಿದರು. ಇದೇ ವಿಚಾರವನ್ನು ಬಳಸಿಕೊಂಡು ಯೂಟ್ಯೂಬ್‌ನಲ್ಲಿ ಲೈವ್‌ ಹೋಗಿ ಅಲ್ಲೂ ಗೊಂದಲವೆಬ್ಬಿಸಲು ಮುಂದಾದರು. ಇದರಲ್ಲಿ ಮನಾಫ್‌ ಹಾಗೂ ಈಶ್ವರ್‌ ಮಲ್ಪೆ ಇಬ್ಬರ ಪಾತ್ರ ಇದೆ ಎಂದು ಕಿಡಿಕಾರಿದರು.
ಇನ್ನು ಮುಂದೆ ನಮ್ಮ ಕುಟುಂಬದ ವಿಚಾರವನ್ನು ಮನಾಫ್‌ ಎಲ್ಲೂ ಪ್ರಸ್ತಾಪಿಸಬಾರದು. ಇಲ್ಲವಾದಲ್ಲಿ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತೇವೆ. ನಮ್ಮ ಕುಟುಂಬಕ್ಕೆ ಯಾರ ಹಣ ಸಹಾಯ ಅಗತ್ಯವಿಲ್ಲ. ಮನಾಫ್‌ ತಮ್ಮ ಲಾರಿಗೆ ಅರ್ಜುನ್‌ ಹೆಸರಿಡಲು ಮುಂದಾಗಿದ್ದಾರೆಂಬ ಮಾಹಿತಿ ಇದೆ. ಇದಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಎಚ್ಚರಿಸಿದರು.

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!