ಶಿವಮೊಗ್ಗ : ಈಗಿನ ಶಾಸಕರ ಆಡಳಿತ ವೈಫಲ್ಯದಿಂದ ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ. ಕ್ಷೇತ್ರದಲ್ಲಿ ಶಾಸಕರು ಹೊಸದಾಗಿ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡುತ್ತಿಲ್ಲ ಎಂದು ಸಚಿವ ಮಧು ಬಂಗಾರಪ್ಪ ವಿರುದ್ಧ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆರೋಪಿಸಿದ್ದಾರೆ.
ಸೊರಬದಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಬೇರೆ ಹೆಸರಿನಲ್ಲಿ ಬದಲಾಯಿಸಿ ಅದೇ ಕೆಲಸ ಮಾಡ್ತಾ ಇದ್ದಾರೆ. ಒಂದು ಉದ್ಘಾಟನೆ ಮಾಡುವ ಧಮ್ಮು, ತಾಕತ್ತು ಅವರಿಗಿಲ್ಲ. ಸಚಿವರು ರಿಯಲ್ ಎಸ್ಟೇಟ್ ದಂಧೆಗಿಳಿದಿದ್ದಾರೆ. ಬಗುರ್ ಹುಕುಂ ಸಾಗುವಳಿ ಸುಧಾರಕ ಎಂದು ಹೇಳಿಕೊಂಡ ಶಾಸಕರು ಹೊಸ ಹಕ್ಕು ಪತ್ರ ನೀಡಿಲ್ಲ. ತಾಲೂಕಿಗೆ ಬಂದ ಅಧಿಕಾರಿಗಳು ಇವರ ಜೊತೆ ಕೈಜೋಡಿಸಿದ್ದಾರೆಂದು ಆರೋಪಿಸಿದರು.
ಪಿಡಬ್ಲೂಡಿ ಇಲಾಖೆಯಲ್ಲಿ ಅಮಾನತ್ತುಗೊಂಡ ಅಧಿಕಾರಿಯನ್ನ ತಂದು ಕೂರಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಹಳೆ ಸೊರಬದಲ್ಲಿ ಎರಡು ಕೆರೆ ಏರಿಗೆ ರಸ್ತೆಗೆ ಲೈಟ್ ಕಂಬಕ್ಕೆ ಕೋಟ್ಯಾಂತರ ರೂ. ಹಣ ತರಲಾಗಿತ್ತು. ಅದರಲ್ಲಿ ಒಂದು ಕೆರೆ ಏರಿ ನಿರ್ಮಿಸಿ ಇನ್ನೊಂದು ಕೆರೆ ನಿರ್ಮಾಣದ ಹಣವನ್ನ ಗುಳುಂ ಮಾಡಲಾಗಿದೆ. ಕೆರೆ ಏರಿ ನಡುವೆ ರಸ್ತೆ ನಿರ್ಮಿಸಿ ಲೈಟ್ ಕಂಬ ತರಲಾಗಿತ್ತು. ಲೈಟ್ ಕಂಬಗಳು ಎಲ್ಲಿವೆ ಎಂದು ಹುಡುಕಬೇಕಿದೆ ಎಂದು ವಾಗ್ದಾಳಿ ನಡೆಸಿದರು.


