ಧರ್ಮಸ್ಥಳ ಪರ ಈಗ ಹಲವು ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿದ್ದು, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಅಮಿತ್ ಶಾಗೆ ಪತ್ರ ಬರೆದ್ದಾರೆ.
ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ರಾಷ್ಟ್ರ ವಿರೋಧಿ ಕೈಗಳು ಕೆಲಸ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಕೇಂದ್ರದಿಂದ ಆಗಬೇಕಿದೆ. ಕೂಡಲೇ ಕೇಂದ್ರ ಮಧ್ಯಪ್ರವೇಶ ಮಾಡಬೇಕು ಎಂದು ಪತ್ರದಲ್ಲಿ ಸ್ವಾಮೀಜಿಗಳು ಮನವಿ ಮಾಡಿದ್ದಾರೆ. ಲಿಂಗಾಯತ ಮಠ, ಜೈನಮಠ, ಬ್ರಾಹ್ಮಣ ಮಠ ಸೇರಿ ಹಲವು ಮಠಾಧೀಶರು ಗೃಹಸಚಿವ ಅಮಿತ್ ಶಾ ಅವರ ಭೇಟಿಗೆ ಅವಕಾಶ ಕೇಳಿದ್ದಾರೆ. ಧರ್ಮಸ್ಥಳದಲ್ಲಿ ಏನೆಲ್ಲ ನಡೆಯುತ್ತಿದೆ ಅನ್ನೋದನ್ನ ವಿವರಿಸಲು ಅವಕಾಶ ಕೋರಿ ಪತ್ರವನ್ನ ಬರೆದಿದ್ದಾರೆ.
ಧಾರವಾಡದ ಶ್ರೀ ನವಗ್ರಹ ತೀರ್ಥಕ್ಷೇತ್ರ ಸ್ವಸ್ತಿ ಶ್ರೀ ಧರ್ಮಸೇನಾ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳು ಧರ್ಮಸ್ಥಳ ವಿಚಾರವಾಗಿ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳು ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ ತನಿಖೆಗೆ ಸಂಬಂಧಿಸಿದ ಎಲ್ಲಾ ಗೊಂದಲಗಳ ಬಗ್ಗೆ ನಿಮಗೆ ತಿಳಿದಿರಬೇಕು. ಈ ಎಲ್ಲಾ ಘಟನೆಗಳು ರಾಷ್ಟ್ರ ವಿರೋಧಿಗಳು, ಎಡಪಂಥೀಯರು, ನಗರ ನಕ್ಸಲರು, ವಿದೇಶಿ ಶಕ್ತಿಗಳು ಒಟ್ಟಾಗಿ ಶ್ರೀ ಕ್ಷೇತ್ರದ ಧರ್ಮ ನಿಷ್ಠೆಯನ್ನ ಕೆಣಕಲು ಕೆಲಸ ಮಾಡುತ್ತಿರುವ ಆಳವಾದ ಪಿತೂರಿಯಿಂದ ಉಂಟಾಗಿವೆ ಎಂಬುದನ್ನ ಗಮನಿಸುವುದು ತುಂಬಾ ನೋವಿನ ಸಂಗತಿ. ನಿಮಗೆ ತಿಳಿದಿರುವಂತೆ, ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಧಾನ ದೇವರು ಮಂಜುನಾಥೇಶ್ವರ ನಮ್ಮ ಭಾರತದ ಹಲವಾರು ಕೋಟಿ ನಾಗರಿಕರ ನಂಬಿಕೆ ಮತ್ತು ನಂಬಿಕೆಯ ಮೂಲವಾಗಿದ್ದಾರೆ. ಶ್ರೀ ಕ್ಷೇತ್ರವನ್ನು ಕೆಣಕುವ ಯಾವುದೇ ಪ್ರಯತ್ನವು ಅತ್ಯಂತ ಖಂಡನೀಯ ಮತ್ತು ಅಸಹನೀಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
