ಬೆಂಗಳೂರು: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು ಅನ್ನೋ ಗಾದೆ ಎಲ್ಲರಿಗೂ ತಿಳಿದೇ ಇದೆ. ಈ ಸೂತ್ರವನ್ನೇ ಸರ್ಕಾರ, ಈಗ ಪ್ರಯೋಗ ಮಾಡಲು ಮುಂದಾಗಿದೆ. ಹೀಗಾಗಿಯೇ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಯತೀಶ್ ಅವರನ್ನ ಎತ್ತಂಗಡಿ ಮಾಡಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಸದ್ಯ ಮಂಗಳೂರಿನ ನೂತನ ಪೊಲೀಸ್ ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿಯನ್ನ ನೇಮಕ ಮಾಡಲಾಗಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿ ಡಾ ಅರುಣ್ ಅವರನ್ನ ನೇಮಿಸಲಾಗಿದೆ. ಈ ಮೂಲಕ ಅಬ್ದುಲ್ ರಹಿಮಾನ್ ಹತ್ಯೆ ಸೇರಿದಂತೆ ಕರಾವಳಿಯಲ್ಲಿ ನಡೆಯುತ್ತಿದ್ದ ಸರಣಿ ಹತ್ಯೆಗಳ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಬಹುದೊಡ್ಡ ಸರ್ಜರಿಯನ್ನ ಸರ್ಕಾರ ಮಾಡಿದಂತಾಗಿದೆ.
ಮುಸ್ಲಿಂರ ಆಕ್ರೋಶಕ್ಕೆ ಮಣಿದು ನಿರ್ಧಾರ.!

ಕರಾವಳಿಯಲ್ಲಿ ಸಾಲು ಸಾಲು ಹತ್ಯೆ ನಡೀತಾ ಇರೋದಕ್ಕೆ ಮುಖ್ಯ ಕಾರಣ ಸರ್ಕಾರ ಅಂತಾ ಮುಸ್ಲಿಂ ಮುಖಂಡರು ಆರೋಪಿಸಿದ್ರು. ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ, ಕೋಮು-ದ್ವೇಷ ಮಾಡಿ ಕೊಲೆಗೆ ಪ್ರಚೋದಿಸುವರ ಮೇಲೂ ಕ್ರಮವಿಲ್ಲ ಅಂತಾ ಮುಸ್ಲಿಂ ಮುಖಂಡರು ಆರೋಪಿಸಿದ್ರು. ಅಲ್ಲದೇ ಕರಾವಳಿಯ ಎಲ್ಲಾ ಮುಸ್ಲಿಂ ಮುಖಂಡರು, ಶಾಸಕರು, ಸಚಿವರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು ಅಂತಾ ಮುಸ್ಲಿಂ ಸಮುದಾಯ ಪಟ್ಟು ಹಿಡಿದಿತ್ತು. ಮುಸ್ಲಿಂ ಸಮುದಾಯದಿಂದ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಬಹುತೇಕರು ರಾಜೀನಾಮೆ ನೀಡುತ್ತೇವೆ ಅನ್ನೋ ವಾಗ್ದಾನವನ್ನ ಸಭೆಯಲ್ಲಿ ಮಾಡಿದ್ರು. ಈ ಬೆಳವಣಿಗೆ ನಡೆದ ಕೆಲವೇ ಕೆಲವು ನಿನಿಷಗಳಲ್ಲಿ ಸರ್ಕಾರ, ಕಮೀಷನರ್ ಹಾಗೂ ಎಸ್ಪಿಯನ್ನ ವರ್ಗಾವಣೆ ಮಾಡುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರೋದು ಸ್ಪಷ್ಟವಾಗಿದೆ. ಸರ್ಕಾರದ ಈ ಕ್ರಮದಿಂದ ಮುಸ್ಲಿಂ ಸಮುದಾಯ ತೃಪ್ತರಾಗ್ತಾರಾ.? ಅಥವಾ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಮೇಲೆ ಮುನಿಸನ್ನ ಮುಂದುವರಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.