ಮೂಡಿಗೆರೆ : ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ, ಮೂಡಿಗೆರೆ ವಲಯದ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಎತ್ತಿನಭುಜ ದಟ್ಟಾರಣ್ಯ ರಸ್ತೆಯಲ್ಲಿ ಫೋರ್ ವೀಲ್ ಡ್ರೈವ್ ಮೋಟಾರು Rally ನಡೆಯುತ್ತಿದ್ದು, ಇದಕ್ಕೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೂರಕ್ಕೂ ಹೆಚ್ಚು ವಾಹನಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹೋಗುತ್ತಿವೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ, ರಹಸ್ಯವಾಗಿ Rally ಆಯೋಜಿಸಲಾಗಿದೆ. ಈ ಕುರಿತು ಮೂಡಿಗೆರೆ ವಲಯ ಅರಣ್ಯಾಧಿಕಾರಿಯಾಗಲೀ ಅಥವಾ ತಳಮಟ್ಟದ ಸಿಬ್ಬಂದಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪದಿಂದಾಗಿ ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ತಾಲ್ಲೂಕಿನ ಜನರು ಮೋಜಿನ ಕ್ರೀಡೆಯಲ್ಲಿ ಭಾಗಿಯಾಗುವುದರ ಮೂಲಕ ಅರಣ್ಯ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದಾರೆಂದು ಸ್ಥಳೀಯರು ಹಾಗೂ ಪರಿಸರ ಪ್ರೇಮಿ ವಿನೋದ್ ಕಣಚೂರು ಆರೋಪಿಸಿದ್ದಾರೆ.
ಅತಿವೇಗದ ವಾಹನಗಳ ಸದ್ದು ವನ್ಯಜೀವಿಗಳಿಗೆ ಕಂಟಕವಾಗಲಿದೆ. ಈ ಭಾಗವು ಆನೆ ಕಾರಿಡಾರ್ ಆಗಿದ್ದು, ಆನೆಗಳು ಅಕ್ಕಪಕ್ಕದ ಹಳ್ಳಿಗಳಿಗೆ ನುಗ್ಗುವ ಸಾಧ್ಯತೆ ಇದೆ. ಅಲ್ಲಿನ DFO ರಮೇಶ್ ಬಾಬು ತನಗೂ ಇದಕ್ಕೂ ಸಂಬಂಧವೇ ಇಲ್ಲದಂತಿದ್ದಾರೆ. ತುರ್ತಾಗಿ ವಾಹನಗಳನ್ನು ಜಪ್ತಿ ಮಾಡಿ, ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.




