
ವರದಿ: ತನು ಕೊಟ್ಟಿಗೆಹಾರ
ಚಿಕ್ಕಮಗಳೂರು/ ಮೂಡಿಗೆರೆ: ಧಾರಾಕಾರ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ, ಕಾರು ಹೇಮಾವತಿ ನದಿಗೆ ಉರುಳಿಬಿದ್ದಿರುವ ಘಟನೆ ಬಣಕಲ್‌ನಲ್ಲಿ ನಡೆದಿದೆ. ಬಣಕಲ್‌ನಿಂದ ಕೊಟ್ಟಿಗೆಹಾರಕ್ಕೆ ಸಾಗುವ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲೇ ರಾಮಣ್ಣನ ಗಂಡಿ ಬಳಿ ಹೇಮಾವತಿ ನದಿಗೆ ಕಾರು ಬಿದ್ದಿದೆ. ಕಾರು ಉರುಳಿ ಬಿದ್ದ ಪರಿಣಾಮ, ಚಾಲಕನಿಗೆ ಗಾಯವಾಗಿದ್ದು, ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು,ಮೂವರನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇನ್ನೂ ಚಕಮಕ್ಕಿಯಲ್ಲೂ ಚಾಲಕನ ನಿಯಂತ್ರಣ ತಪ್ಪಿ ತುಮಕೂರು ಮೂಲದ ಕಾರೊಂದು ಹೇಮಾವತಿ ನದಿಗೆ ಬಿದ್ದಿದೆ. ಕಾರಿನಲ್ಲಿದ್ದವರು ಪವಾಡ ಸದೃಶ ರೀತಿಯಲ್ಲಿ ಕಾರಿನ ಗ್ಲಾಸ್ ಒಡೆದು ಹೊರಗಡೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಸಮಾಜ ಸೇವಕ ಆರೀಫ್ ಹೋಗಿ ಕಾರನ್ನ ಮೇಲೆತ್ತಲು ಸಹಾಯ ಮಾಡಿದ್ದಾರೆ. ಬಿರುಗಾಳಿ ಸಹಿತ ಮಳೆಯಿಂದ ರಸ್ತೆಯಲ್ಲಿ ಡ್ರೈವಿಂಗ್ ಮಾಡೋದೇ ಸಾಹಸದ ಕೆಲಸವಾಗಿದೆ.
ಉರುಳಿ ಬಿದ್ದ ಮರ- ಮನೆ, ಕಾರು ಸಂಪೂರ್ಣ ಜಖಂ
ಇನ್ನೂ ಮಳೆ ಆರ್ಭಟಕ್ಕೆ ತ್ರಿಪುರದ ಚೇತನ್ ಎಂಬುವರ ಮನೆ ಮೇಲೆ ಮರಬಿದ್ದಿದ್ದು, ಮನೆ ಪಕ್ಕದಲ್ಲಿದ್ದ ಕಾರು ಕೂಡ ನಜ್ಜು ಗುಜ್ಜಾಗಿದೆ. ಮನೆಯಲ್ಲಿದ್ದ ಪಿಠೋಪಕರಣಗಳು ಸೇರಿದಂತೆ ಗೃಹಪಯೋಗಿ ವಸ್ತುಗಳಿಗೆ ಹಾನಿ ಸಂಭವಿಸಿದೆ. ಮಲೆನಾಡಲ್ಲಿ ಮುಂಗಾರು ಮಳೆ ಆರ್ಭಟ ಒಂದ್ಕಡೆಯಾದ್ರೆ, ಮತ್ತೊಂದೆಡೆ ಬಿರುಗಾಳಿಯ ಆರ್ಭಟವೂ ಹೆಚ್ಚಾಗಿದೆ. ಒಟ್ಟಿನಲ್ಲಿ ಅವಧಿಗೂ ಮುನ್ನವೇ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಜಿಲ್ಲೆಯ ಹಲೆವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನೂ ಚಿಕ್ಕಮಗಳೂರು ಜಿಲ್ಲೆಗೆ ಇಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಜನರು ಓಡಾಟ ನಡೆಸುವಾಗ ಎಚ್ಚರಿಕೆಯ ನಡೆ ಪಾಲಿಸುವುದು ಉತ್ತಮ