
ಚಿಕ್ಕಮಗಳೂರು : ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಅಂಬರ್ ವ್ಯಾಲಿಯಲ್ಲಿ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇರಳದ ತ್ರಿಶೂರ್‌ನ ಕೆ.ಬಿ. ಆದಿತ್ಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ದ್ವಿತೀಯ ಬಹುಮಾನವನ್ನು ಕೊಚ್ಚಿಯ ಅಮನ್ ಬಿ. ಮನೋಜ್, ತೃತೀಯ ಬಹುಮಾನವನ್ನು ಬೆಂಗಳೂರಿನ ಹೇಜೆಲ್ ಮರಿಯಾ ಬೊಬೇನ್ ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಗಳಿಸಿದ ಕೆ.ಬಿ. ಆದಿತ್ಯ ಅವರಿಗೆ ಪ್ರಶಸ್ತಿ ಪಲಕ, ಟ್ರೋಫಿ, ಟ್ಯಾಬ್, ಜತೆಗೆ ಒಂದು ಲಕ್ಷ ರೂ ಶೈಕ್ಷಣಿಕ ಸ್ಕಾಲರ್‌ಶಿಪ್ ಚೆಕ್ ಅನ್ನು ನಟ ರಮೇಶ್ ಅರವಿಂದ್ ವಿತರಿಸಿದರು.
ಸಂಸ್ಥೆಯ ಸ್ಥಾಪಕರಾದ ಸಿದ್ದಾರ್ಥ ಅವರ ಸ್ಮರಣಾರ್ಥ ಮೂರು ವರ್ಷದಿಂದ ರಾಷ್ಟ್ರಮಟ್ಟದ ಕ್ವಿಜ್ ಸ್ಪರ್ಧೆ ನಡೆಸಿಕೊಂಡು ಬರಲಾಗುತ್ತಿದೆ. ಮೂರನೇ ವರ್ಷದ ಸ್ಪರ್ಧೆಯಲ್ಲಿ 4500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಓಟ್ಟು ಮೂರು ಹಂತದಲ್ಲಿ ಸ್ಪರ್ಧೆ ನಡೆದಿತ್ತು. ಅಂತಿಮ ಸುತ್ತಿಗೆ 8 ಮಂದಿ ವಿದ್ಯಾರ್ಥಿಗಳು ಅರ್ಹತೆ ಗಿಟ್ಟಿಸಿದ್ದರು.
ಕ್ವಿಜ್ ಮಾಸ್ಟರ್ ಗಿರಿ ಸುಬ್ರಮಣಿಯನ್ ಅಂತಿಮ ಸುತ್ತನ್ನು ನಡೆಸಿಕೊಟ್ಟರು. ಸ್ಪರ್ಧೆ ಕುರಿತಾಗಿ ಮಾತನಾಡಿದ ಸಂಸ್ಥೆ ಮುಖ್ಯಸ್ಥೆ ಐಶ್ವರ್ಯ ಶಿವಕುಮಾರ್, ವರ್ಷದಿಂದ ವರ್ಷಕ್ಕೆ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಷ್ಟ್ರಮಟ್ಟದಲ್ಲೇ ಅತ್ಯುತ್ತಮ ಕ್ವಿಜ್ ಸ್ಪರ್ಧೆಯನ್ನಾಗಿ ರುಪುಗೊಳಿಸುವ ಕನಸಿದೆ ಎಂದರು.

