Saturday, August 9, 2025
!-- afp header code starts here -->
Homebig breakingಸರ್ಕಾರದೆದುರು ಶಿರಬಾಗಿದ ನಕ್ಸಲರು - ಸಿಎಂ ಎದುರಲ್ಲೇ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮರಳಿದ 06 ಮಂದಿ -...

ಸರ್ಕಾರದೆದುರು ಶಿರಬಾಗಿದ ನಕ್ಸಲರು – ಸಿಎಂ ಎದುರಲ್ಲೇ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮರಳಿದ 06 ಮಂದಿ – ಕರುನಾಡಲ್ಲಿ ಕೆಂಪು ಉಗ್ರರ ಯುಗಾಂತ್ಯ..!?

ಬೆಂಗಳೂರು ವರದಿ : ಕಾಡಿನಲ್ಲಿದ್ದುಕೊಂಡು ನಾಗರೀಕ ಸಮಾಜದ ಆತಂಕಕ್ಕೆ ಕಾರಣವಾಗುವ ಜೊತೆಗೆ ಸರ್ಕಾರಕ್ಕೆ ಸವಾಲಾಗಿದ್ದ ಕರ್ನಾಟಕದ ೬ ಮಂದಿ ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೆ. ಆ ಮೂಲಕ ನಕ್ಸಲರ ಶರಣಾಗತಿ ಬಗ್ಗೆ ಆಗುತ್ತಿದ್ದ ಚರ್ಚೆಗೆ ಇತಿಶ್ರೀ ಬಿದ್ದಿದೆ.
ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಏರಡು ದಶಕಗಳಿಂದ ತಮ್ಮದೇ ಆದ ಸೈದ್ಧಾಂತಿಕ ನೆಲೆಯಲ್ಲಿ ಹೋರಾಟ ಮಾಡುತ್ತಿದ್ದ ೬ ಮಂದಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಜಿ. ಪರಮೇಶ್ವರ ಸಮ್ಮುಖದಲ್ಲಿ ಪೊಲೀಸ್‌ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಆರು ನಕ್ಸಲರಾದ ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್. ಜೀಶಾ ಹಲವು ವರ್ಷಗಳ ಸಶಸ್ತ್ರ ಹೋರಾಟಕ್ಕೆ ಗುಡ್​ಬೈ ಹೇಳಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ನಕ್ಸಲರು ಚರ್ಚಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ. ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಶರಣಾಗಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಬೇಕಾದ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿತ್ತು. ಮಾತ್ರವಲ್ಲ ಇಡೀ ರಾಜ್ಯದ ಚಿತ್ತ ಕಾಫಿನಾಡಿನತ್ತ ನೆಟ್ಟಿತ್ತು.


ಆದರೆ ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಲು ನಕ್ಸಲರು ತೀರ್ಮಾನಿಸಿದರು. ಹಾಗಾಗಿ ಬುಧವಾರ(ಜ.೦೮) ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಶೃಂಗೇರಿಯಿಂದ ಹೊರಟ ನಕ್ಸಲರ ತಂಡ ಚಿಕ್ಕಮಗಳೂರಿನಲ್ಲಿ ಮಾತುಕತೆ ಮುಗಿಸಿ ಬೆಂಗಳೂರಿನತ್ತ ಸಾಗಿತು. ಸಂಜೆ 6 ಗಂಟೆ ಸುಮಾರಿಗೆ ಸಿಎಂ ಗೃಹ ಕಚೇರಿ ಕೃಷ್ಣಗೆ ತಲುಪಿತು. ತಂಡದ ತಪಾಸಣೆ ನಡೆಸಿದ ಪೊಲೀಸರು ಕಚೇರಿ ಒಳಗೆ ಬಿಟ್ಟರು. ಸಿಎಂ ಎದುರು ಶರಣಾದ ಬಳಿಕ ಅವರೊಂದಿಗೆ ಸಿದ್ದರಾಮಯ್ಯ ಸಮಾಲೋಚನೆ ಸಭೆ ನಡೆಸಿದರು. ಈ ವೇಳೆ ಹಿರಿಯ ಪೊಲೀಸ್‌ ಅಧಿಕಾರಿಗಳು, ನಕ್ಸಲರ ಕುಟುಂಬಸ್ಥರು ಉಪಸ್ಥಿತರಿದ್ದರು.
1990ರಿಂದ 2012ರವರೆಗೆ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ತೀವ್ರ ಸ್ವರೂಪದಲ್ಲಿತ್ತು. ೪೦ಕ್ಕೂ ಅಧಿಕ ಮಂದಿ ನಕ್ಸಲೀಯರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ಅರಣ್ಯ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಈ ನಡುವೆ ನಕ್ಸಲ್‌ ಚಟುವಟಿಕೆ ನಿಯಂತ್ರಣಕ್ಕಾಗಿ ಸರ್ಕಾರ ನಕ್ಸಲ್‌ ನಿಗ್ರಹ ದಳದವನ್ನೂ ರಚಿಸಿತ್ತು. 11 ಎನ್‌ ಕೌಂಟರ್‌ಗಳಲ್ಲಿ 19 ಮಂದಿ ನಕ್ಸಲೀಯರು ಹತ್ಯೆಗೀಡಾಗಿದ್ದರು. 2005ರಲ್ಲಿ ತುಮಕೂರಿನಲ್ಲಿ ನಕ್ಸಲೀಯರ ದಾಳಿಗೆ ರಾಜ್ಯದ ಎಂಟು ಮಂದಿ KSRP ಪೊಲೀಸರು ಹುತಾತ್ಮರಾಗಿದ್ದರು. ಮಾತ್ರವಲ್ಲ ೭ ಮಂದಿ ಸಾರ್ವಜನಿಕರನ್ನು ನಕ್ಸಲರು ಕೊಲೆ ಮಾಡಿದ್ದರು.


2003ರ ನವೆಂಬರ್‌ 17ರಂದು ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ANF ಎನ್‌ ಕೌಂಟರ್‌ನಲ್ಲಿ ರಾಯಚೂರಿನ ಹಾಜಿಮಾ ಮತ್ತು ಕೊಪ್ಪದ ಪಾರ್ವತಿ ಎಂಬಿಬ್ಬ ನಕ್ಸಲರು ಬಲಿಯಾಗಿದ್ದರು. 2005ರ ಫೆಬ್ರವರಿ 6ರಂದು ಕರ್ನಾಟಕದ ನಕ್ಸಲ್‌ ನಾಯಕ ಸಾಕೇತ್‌ರಾಜನ್‌ ಹಾಗೂ ಸಹಚರ ಶಿವಲಿಂಗು ಚಿಕ್ಕಮಗಳೂರಿನಲ್ಲಿ ಬಲಿಯಾಗಿದ್ದರು. ಸಾಕೇತ್‌ ರಾಜನ್‌ ಎನ್‌ಕೌಂಟರ್‌ಗೆ ಪ್ರತೀಕಾರವಾಗಿ ನಕ್ಸಲೀಯರು 2005ರ ಫೆಬ್ರವರಿ 10ರಂದು ವೆಂಕಟಮ್ಮನಹಳ್ಳಿಯಲ್ಲಿ ಆರು ಪೊಲೀಸರು ಹಾಗೂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದರು. 2005ರ ಮೇ 17ರಂದು ಪೊಲೀಸರಿಗೆ ಮಾಹಿತಿ ಕೊಡುತ್ತಿದ್ದಾರೆಂದು ಆರೋಪಿಸಿದ ನಕ್ಸಲರು ಬುಡಕಟ್ಟು ಮುಖಂಡ ಶೇಷಯ್ಯ ಎಂಬವರನ್ನು ಹತ್ಯೆ ಮಾಡಿತ್ತು.
2005ರ ಜೂನ್‌ 23ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ದೇವರಬಾಳುವಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅಜಿತ್‌ ಕುಸಬಿ, ಸಬ್ಲಿ ಉಮೇಶ್‌ ಹತರಾಗಿದ್ದರು. 2006ರ ಡಿಸೆಂಬರ್‌ 25ರಂದು ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ದಿನಕರ್‌, 2007ರ ಜುಲೈ 10ರಂದು ಕೊಪ್ಪದಲ್ಲಿ ನಡೆದ ಎನ್‌ಕೌಂಡರ್‌ನಲ್ಲಿ ಸಿಂಧನೂರಿನ ಗೌತಮ್‌, ಪರಮೇಶ್ವರ, ಸುಂದರೇಶ್‌, ಮನೆಯ ಯಜಮಾನ ರಾಮೇಗೌಡ, ಪತ್ನಿ ಕಾವೇರಿ ಹತರಾಗಿದ್ದರು.


2008ರ ನವೆಂಬರ್‌ 19ರಂದು ಹೊರನಾಡು ಭಾಗದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮನೋಹರ್‌, ಅಭಿಲಾಷ್, ನವೀನ್‌ ಹತ್ಯೆಗೀಡಾಗಿದ್ದರು. 2010ರ ಮಾರ್ಚ್‌ 1ರಂದು ಕುತ್ಲೂರಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ವಸಂತ ಗೌಡ್ಲು ಕೊನೆಯುಸಿರೆಳೆದಿದ್ದ. 2024ರ ನವೆಂಬರ್‌ 18ರಂದು ಹೆಬ್ರಿಯ ಪೀತಬೈಲು ಸಮೀಪ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ಮುಖಂಡ ವಿಕ್ರಮ್‌ ಗೌಡ ಹತನಾಗಿದ್ದ.
ವಿಕ್ರಂ ಗೌಡ ಎನ್‌ಕೌಟರ್‌ಗೂ ಮುಂಚೆಯೇ ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ ಈ ವಿಚಾರ ವಿಕ್ರಂ ಗೌಡ ಹತನಾದ ಬಳಿಕ ಮುನ್ನೆಲೆಗೆ ಬಂದಿತ್ತು. ಇದೀಗ ೬ ಮಂದಿ ಶರಣಾಗುವ ಮೂಲಕ ಒಂದು ದೊಡ್ಡ ನಕ್ಸಲ್‌ ಅದ್ಯಾಯ ಕೊನೆಯಾದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -!-- afp header code starts here -->

Most Popular

Recent Comments

error: Content is protected !!