Saturday, February 7, 2026
Homebig breakingNew Year 2026: ಸುರಕ್ಷತಾ ಮಾರ್ಗಸೂಚಿ ಪ್ರಕಟ; ಮೋಜು-ಮಸ್ತಿಗೆ ಬ್ರೇಕ್ ಇಲ್ಲ, ಕಿಡಿಗೇಡಿತನಕ್ಕೆ ಕ್ಷಮೆ ಇಲ್ಲ!

New Year 2026: ಸುರಕ್ಷತಾ ಮಾರ್ಗಸೂಚಿ ಪ್ರಕಟ; ಮೋಜು-ಮಸ್ತಿಗೆ ಬ್ರೇಕ್ ಇಲ್ಲ, ಕಿಡಿಗೇಡಿತನಕ್ಕೆ ಕ್ಷಮೆ ಇಲ್ಲ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಿಎಂ, ಸಾರ್ವಜನಿಕರ ಸುರಕ್ಷತೆಗಾಗಿ ಹತ್ತಾರು ಮುನ್ನೆಚ್ಚರಿಕೆ ಕ್ರಮಗಳನ್ನು ಘೋಷಿಸಿದರು.

ಸುರಕ್ಷತೆಗಾಗಿ ಪೊಲೀಸ್ ಪಡೆಗಳ ನಿಯೋಜನೆ

ನಗರದಾದ್ಯಂತ ಶಾಂತಿ ಕಾಪಾಡಲು ಬರೋಬ್ಬರಿ 20,000 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಇದರಲ್ಲಿ ಹೊರ ಜಿಲ್ಲೆಗಳಿಂದ 1,200 ಪೊಲೀಸರು ಆಗಮಿಸಲಿದ್ದಾರೆ. ಪ್ರಮುಖವಾಗಿ ಮಹಿಳೆಯರ ರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರು ಹಾಗೂ ಚೆನ್ನಮ್ಮ ಪಡೆ ಸಕ್ರಿಯವಾಗಿರಲಿದೆ ಎಂದು ಸಿಎಂ ತಿಳಿಸಿದರು.

ಸಂಚಾರ ಮತ್ತು ಸಾರಿಗೆ ವ್ಯವಸ್ಥೆ

  • ಮಧ್ಯರಾತ್ರಿ ಬಿಎಂಟಿಸಿ ಬಸ್: ಸಂಭ್ರಮಾಚರಣೆ ಮುಗಿಸಿ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಮಧ್ಯರಾತ್ರಿ ನಂತರ ಹೆಚ್ಚಿನ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಇರಲಿದೆ.
  • ಫ್ಲೈ ಓವರ್ ಬಂದ್: ಹೊಸ ವರ್ಷಾಚರಣೆಯ ರಾತ್ರಿ ನಗರದ 50 ಫ್ಲೈ ಓವರ್‌ಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು.
  • ಡ್ರಿಂಕ್ ಆಂಡ್ ಡ್ರೈವ್: ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ಕಣ್ಣಿಡಲಾಗಿದ್ದು, ಈಗಾಗಲೇ ಕಳೆದ ಮೂರು ದಿನಗಳಲ್ಲಿ 3,500 ಪ್ರಕರಣಗಳು ದಾಖಲಾಗಿವೆ.

ಪ್ರಮುಖ ಸ್ಥಳಗಳ ಮೇಲೆ ನಿಗಾ

ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ ಹಾಗೂ ಇಂದಿರಾನಗರದಂತಹ ಜನದಟ್ಟಣೆ ಪ್ರದೇಶಗಳಲ್ಲಿ ಅನಾಹುತಗಳನ್ನು ತಡೆಯಲು ಆಧುನಿಕ ತಂತ್ರಜ್ಞಾನ ಹಾಗೂ ಸಿಸಿಟಿವಿಗಳ ಬಳಕೆ ಮಾಡಲಾಗುತ್ತಿದೆ. ಸುರಕ್ಷತೆಗಾಗಿ 4 ಕಂಟ್ರೋಲ್ ರೂಂ, 78 ಕಾವಲು ಗೋಪುರ ಹಾಗೂ ತುರ್ತು ಸೇವೆಗಾಗಿ 55 ಆಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಕಿಡಿಗೇಡಿಗಳಿಗೆ ಎಚ್ಚರಿಕೆ

“ವ್ಹೀಲಿಂಗ್ ಮಾಡುವುದು ಅಥವಾ ಮಾದಕ ದ್ರವ್ಯ ಚಟುವಟಿಕೆಗಳಲ್ಲಿ ತೊಡಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ,” ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಈ ಸಭೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ನಗರ ಪೊಲೀಸ್ ಆಯುಕ್ತರು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!