ಕಡುನಾ(ನೈಜೀರಿಯಾ) : ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡು 70 ಮಂದಿ ಮೃತಪಟ್ಟಿರುವ ಘಟನೆ ಉತ್ತರ ನೈಜೀರಿಯಾದ ಕಡುನಾ ನಗರದಲ್ಲಿ ಸಂಭವಿಸಿದೆ.
ಟ್ಯಾಂಕರ್‌ನಲ್ಲಿ 60,000 ಲೀಟರ್ ಪೆಟ್ರೋಲ್ ಸಾಗಿಸಲಾಗುತ್ತಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡು ಟ್ಯಾಂಕರ್ ಪಲ್ಟಿಯಾಗಿದೆ. ಟ್ರಕ್ ಪಲ್ಟಿಯಾದಾಗ ಚೆಲ್ಲಿದ್ದ ಪೆಟ್ರೋಲ್‌ನ್ನು ತುಂಬಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಈ ವೇಳೆ ಟ್ಯಾಂಕರ್ ಸ್ಪೋಟಗೊಂಡಿದ್ದು, 70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ೫೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಸುತ್ತಮುತ್ತಲಿನ 15ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನೈಜಿರಿಯಾದ ಕಡುನಾಗೆ ಸಂಪರ್ಕಿಸುವ ರಸ್ತೆಯ ಡಿಕ್ಕೊ ಜಂಕ್ಷನ್‌ನಲ್ಲಿ ಈ ಅವಘಡ ಸಂಭವಿಸಿದೆ. ಈ ರಾಷ್ಟ್ರದಲ್ಲಿ ಕಳೆದ 18 ತಿಂಗಳಲ್ಲಿ ಪೆಟ್ರೋಲ್ ಬೆಲೆ ಐದು ಪಟ್ಟು ಹೆಚ್ಚಾಗಿದೆ. ಹೀಗಾಗಿ ಟ್ರಕ್ ಪಲ್ಟಿಯಾದ ಸಮಯದಲ್ಲಿ ಪೆಟ್ರೋಲ್ ತೆಗೆದುಕೊಳ್ಳಲು ಜನ ಮುಗಿಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.