ಚಿಕ್ಕಮಗಳೂರು : ಕೆಸರುಗದ್ದೆ ಕ್ರೀಡಾಕೂಟ… ಹೆಸರು ಕೇಳಿದ್ರೆ ಮೈ ರೋಮಾಂಚನಗೊಳ್ಳುತ್ತೆ. ! ಮೈಂಡ್-ಮನಸ್ಸನ್ನ ರಿಲ್ಯಾಕ್ಸ್ ಮಾಡ್ಕೊಬಹುದು ಅನ್ನೋ ಭಾವ ಮೂಡುತ್ತೆ.! ಈಗ ಅದಕ್ಕೆ ವೇದಿಕೆ ಕಲ್ಪಿಸುತ್ತಾ ಇರೋದು ಜನಪರ ಸುದ್ದಿ ಮಾಧ್ಯಮವಾಗಿರುವ ಪಬ್ಲಿಕ್ ಇಂಪ್ಯಾಕ್ಟ್.! ಈ ಬಾರಿ ಕೆಸರುಗದ್ದೆ ಸೀಸನ್ 2ಗೆ ಮತ್ತೆ ಅಖಾಡ ಸಿದ್ದವಾಗಿದೆ. ಎಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತೆ..? ಯಾವಾಗ ನಡೆಯುತ್ತೆ..? ಹೇಗೆ ನಡೆಯುತ್ತೆ..? ನಾವು ಕೂಡ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗಿಯಾಗಬಹುದಾ.? ಅನ್ನುವ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ಎಲ್ಲರು ಕುತೂಹಲದಿಂದ ಕಾಯುತ್ತಿರುವ ʼಪಬ್ಲಿಕ್ ಇಂಪ್ಯಾಕ್ಟ್ ಕೆಸರುಗದ್ದೆ ಕ್ರೀಡಾಕೂಟ ಸೀಸನ್ 2ʼಗೆ ಮುಹೂರ್ತ ಫಿಕ್ಸ್ ಆಗಿದೆ. ಕಳೆದ ಬಾರಿ ಅಭೂತಪೂರ್ವ ಯಶಸ್ಸಿನೊಂದಿಗೆ ರಾಜ್ಯದೆಲ್ಲೆಡೆ ಸಂಚಲನ ಸೃಷ್ಠಿ ಮಾಡಿದ ಕೆಸರುಗದ್ದೆ ಅಖಾಡಕ್ಕೆ ಇಳಿಯಲು ನೀವು ಕೂಡಾ ಸಿದ್ದರಾಗಿ. ಪೂರ್ಣಚಂದ್ರ ತೇಜಸ್ವಿರವರ ತವರೂರಾದ ಮೂಡಿಗೆರೆಯಲ್ಲಿ ಇದೇ ತಿಂಗಳ 29ರಂದು ರಾಜ್ಯ ಹಾಗೂ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಡ ನಡೆಯಲಿದೆ. ಇದರ ಮೊದಲ ಹೆಜ್ಜೆಯಾಗಿ ಇಂದು ಚಿಕ್ಕಮಗಳೂರಿನ ಪಬ್ಲಿಕ್ ಇಂಪ್ಯಾಕ್ಟ್ ಕೇಂದ್ರ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಮಾತೃ ಹೃದಯಿಗಳಾದ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೀನಾ ನಾಗರಾಜು, ಜಿಲ್ಲಾ ಪಂಚಾಯಿತಿ ಸಿಇಒ ಕೀರ್ತನಾ, ನಗರಸಭೆ ಅಧ್ಯಕ್ಷೆ ಸುಜಾತ ಹಾಗೂ ಬಿಜೆಪಿ ನಾಯಕಿ ಪಲ್ಲವಿ ಸಿ.ಟಿ.ರವಿ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು. ರಾಜ್ಯ-ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಶುಭಹಾರೈಸಿದ್ದರು.
ಜಿಲ್ಲಾಧಿಕಾರಿ ಮೀನಾ ನಾಗರಾಜು ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಅಂದ್ರೆ ಕಾಫಿನಾಡು ಅಂತಾನೇ ಪ್ರಸಿದ್ದಿ.. ಇಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನ ಪಬ್ಲಿಕ್ ಇಂಪ್ಯಾಕ್ಟ್ ಕಳೆದ ವರ್ಷದಿಂದ ಮಾಡ್ತಿರೋದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಕ್ರೀಡಾಕೂಟದಲ್ಲಿ ಎಲ್ಲರೂ ಹೆಚ್ಚಾಗಿ ತೊಡಗಿಸಿಕೊಳ್ಳಿ ಅಂತ ಕ್ರೀಡಾಸಕ್ತರಿಗೆ ಕರೆ ನೀಡಿದ್ರು.

ಜಿಪಂ ಸಿಇಒ ಕೀರ್ತನಾ ಮಾತನಾಡಿ, ಈ ಬಾರಿಯ ಕೆಸರುಗದ್ದೆ ಸೀಸನ್ 2 ತುಂಬಾ ವಿಭಿನ್ನವಾಗಿ ಕೂಡಿದ್ದು, ಮಕ್ಕಳು, ಯುವಕ-ಯುವತಿಯರು, 60 ವರ್ಷದ ದಾಟಿದ ಹಿರಿಯ ನಾಗರೀಕರನ್ನೂ ಒಳಗೊಂಡಂತೆ ದಂಪತಿಗೂ ಕೂಡ ಆಕರ್ಷಕ ಸ್ಪರ್ಧೆಗಳನ್ನು ಹಮ್ಮಿಕೊಂಡಿರುವುದು ತುಂಬಾ ಖುಷಿ ಕೊಟ್ಟಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಸುಜಾತ ಮಾತನಾಡಿ, ಪಬ್ಲಿಕ್ ಇಂಪ್ಯಾಕ್ಟ್ ಮಾಧ್ಯಮ ಕೆಸರುಗದ್ದೆ ಕ್ರೀಡಾಕೂಟವನ್ನ ಮಾಡಿ, ಗ್ರಾಮೀಣ ಕ್ರೀಡೆಯನ್ನ ಪ್ರೋತ್ಸಾಹಿಸುತ್ತಿದೆ ಅಂತ ಶ್ಲಾಘಿಸಿದರು.
ಪಲ್ಲವಿ ಸಿ.ಟಿ. ರವಿ ಮಾತನಾಡಿ, ಕೈ ಕೆಸರಾದ್ರೆ ಬಾಯಿ ಮೊಸರು ಅನ್ನೋ ಗಾದೆಯನ್ನ ನಾವೆಲ್ಲ ಕೇಳಿದ್ದೇವೆ. ಆದ್ರೆ ಕೈ ಕೆಸರನ್ನ ಯಾರೂ ಮಾಡಿಕೊಳ್ತಿಲ್ಲ ಹಾಗಾಗೀ ನಮ್ಗೆ ರೆಡಿಮೇಡ್ ಬಾಯಿ ಮೊಸರು ಸಿಗ್ತಾ ಇದೆ. ನಾವು ಕೈ ಕೆಸರು ಮಾಡಿಕೊಂಡ್ರೆ ಆರೋಗ್ಯ ವೃದ್ಧಿಸುತ್ತೆ. ಈ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಮಾಡ್ತಿರೋದು ಸಂತಸ ತಂದಿದೆ. ಮುಖ್ಯವಾಗಿ ಈ ರೀತಿಯ ಕ್ರೀಡೆಯಲ್ಲಿ ಶಾಲೆಯ ಮಕ್ಕಳು ಭಾಗಿಯಾಗ್ಬೇಕು ಅಂತ ಆಶಾಭಾವನೆ ವ್ಯಕ್ತಪಡಿಸಿದರು.
ಪಬ್ಲಿಕ್ ಇಂಪ್ಯಾಕ್ಟ್ ಎಡಿಟರ್ ಪ್ರಶಾಂತ್ ಮೂಡಿಗೆರೆ, ಹಿತೈಷಿಗಳಾದ ಸತೀಶ್ , ವಾಹಿನಿ ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಏನೇನಿರುತ್ತೆ..?
ಕೆಸರುಗದ್ದೆ ಕ್ರೀಡಾಕೂಟವನ್ನ ರಾಜ್ಯಮಟ್ಟ ಹಾಗೂ ಜಿಲ್ಲಾಮಟ್ಟ ಎರಡು ವಿಭಾಗದಲ್ಲಿ ಆಯೋಜಿಸಲಾಗಿದೆ. ಪುರುಷರ ವಿಭಾಗದಲ್ಲಿ ಹಗ್ಗಾಜಗ್ಗಾಟ-ವಾಲಿಬಾಲ್ ಪಂದ್ಯ ನಡೆಯಲಿದೆ. ಜಿಲ್ಲಾಮಟ್ಟದ ಹಗ್ಗಾಜಗ್ಗಾಟ ಸ್ಪರ್ಧೆಯಲ್ಲಿ ಜಿಲ್ಲೆಯ ಪುರುಷರು-ಮಹಿಳೆಯರು ಭಾಗವಹಿಸಬಹುದಾಗಿದೆ. ಜಿಲ್ಲೆಯ ಪುರುಷರಿಗಾಗಿ ವಾಲಿಬಾಲ್ ಪಂದ್ಯಾಟ ಹಾಗೂ ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯಾಟ ನಡೆಯಲಿದೆ. ಜಿಲ್ಲಾಮಟ್ಟದಲ್ಲಿ ನೂರು ಮೀಟರ್ ಮುಕ್ತ ಓಟ ಸ್ಪರ್ಧೆ, ದಂಪತಿ ಓಟ, 60 ವರ್ಷ ದಾಟಿದ ಹಿರಿಯರಿಗಾಗಿ ಕೂಡ ಓಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ನಮ್ಮೆಲ್ಲರನ್ನು ರಂಜಿಸಲು ಖ್ಯಾತ ನಟ-ನಟಿಯರು, ಸೋಷಿಯಲ್ ಮೀಡಿಯಾ ಸ್ಟಾರ್ ಗಳು, ರಾಜಕೀಯ ನಾಯಕರು, ಗಣ್ಯರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಾಧಕರು ಆ ದಿನ ನಮ್ಮ ಜತೆಯಾಗಲಿದ್ದಾರೆ. ಕೆಸರುಗದ್ದೆ ಸಂಭ್ರಮದಲ್ಲಿ ಮಿಂದೇಳಲಿದ್ದಾರೆ. ಬನ್ನಿ, ಎಲ್ಲರೂ ಸೇರಿ ಕೆಸರುಗದ್ದೆ ಸಂಭ್ರಮದಲ್ಲಿ ಮಿಂದೆಳೋಣ..!



