ಶಿರೂರು : ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಲ್ಲಿ ಸಿಲುಕಿ ಕಣ್ಮೆಯಾದ ವ್ಯಕ್ತಿಗಳು ಹಾಗೂ ವಾಹನಗಳ ಪತ್ತೆಗಾಗಿ ಮತ್ತೆ ಹುಡುಕಾಟ ನಡೆಯುತ್ತಿದೆ. ಶೋಧ ಕಾರ್ಯಾಚರಣೆಗೆ ಅತ್ಯಾಧುನಿಕ ಡ್ರೆಜರ್ ಅನ್ನೂ ತರಿಸಿಕೊಳ್ಳಲಾಗಿದೆ. ಈ ಮಧ್ಯೆ ಶೋಧ ಕಾರ್ಯಾಚರಣೆ ವಿಚಾರದಲ್ಲಿ ಹೊಂದಾಣಿಕೆ ಕೊರತೆ ಎದುರಾಗಿದೆ.

ಸಂವಹನ ಕೊರತೆ ಪರಿಣಾಮ ಪ್ರಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಮ್ಮ ಕಾರ್ಯಾಚರಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ಸಾಗಿದ್ದಾರೆ. ಮೂರನೇ ಹಂತದ ಹುಡುಕಾಟದ ಸಂದರ್ಭ ಈಶ್ವರ್ ಮಲ್ಪೆ ತಂಡ ಸ್ವಯಂಪ್ರೇರಿತರಾಗಿ ಭಾಗಿಯಾಗಿದ್ದರು. ಗಂಗಾವಳಿ ನದಿಯಲ್ಲಿ ಮುಳುಗಿ ನೀರಿನಡಿ ಸಿಲುಕಿದ್ದ ಕೆಲವು ಅವಶೇಷಗಳನ್ನು ಪತ್ತೆ ಮಾಡುವಲ್ಲಿ ಈಶ್ವರ್ ಮಲ್ಪೆ ಯಶಸ್ವಿಯೂ ಆಗಿದ್ದರು.

ಡ್ರೆಜರ್ ಕಾರ್ಯಾಚರಣೆ ಆರಂಭವಾದ ನಂತರ ಡ್ರೆಜರ್ ಸಿಬ್ಬಂದಿ, ಅಧಿಕಾರಿಗಳು ಹಾಗೂ ಈಶ್ವರ್ ತಂಡದ ನಡುವೆ ಹೊಂದಾಣಿಕೆ ಏರ್ಪಟ್ಟಿರಲಿಲ್ಲ. ತನ್ನ ಕಾರ್ಯಾಚರಣೆಗೆ ಡ್ರೆಜರ್ ಸಿಬ್ಬಂದಿ ತೊಡಕಾಗುತ್ತಿದ್ದಾರೆಂದು ಈಶ್ವರ್ ಮಲ್ಪೆ ಆರೋಪಿಸಿದ್ದರು. ಅಧಿಕಾರಿಗಳು ಕೂಡಾ ತಮಗೆ ಸಹಕರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಈ ಬೆಳವಣಿಗೆ ನಡುವೆ ಈಶ್ವರ್ ಮಲ್ಪೆ ತಂಡ ಈ ಪ್ರಕರಣವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಜಿಲ್ಲಾಡಳಿತ, ಸರ್ಕಾರದ ಬಗ್ಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆಂದು ಅಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರಿಗೆ ದೂರಿದ್ದರು ಎನ್ನಲಾಗಿದೆ. ಭಾನುವಾರ ಕಾರ್ಯಾಚರಣೆಯಲ್ಲಿದ್ದಾಗಲೇ ಈಶ್ವರ್ ಮಲ್ಪೆಗೆ ಕರೆ ಮಾಡಿದ ಅಧಿಕಾರಿಯೊಬ್ಬರು ಅವರೊಂದಿಗೆ ಏರು ಧನಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ತಂಡದ ಇತರೆ ಸದಸ್ಯರು ಕಾರ್ಯಾಚರಣೆ ಮುಂದುವರೆಸಲು ಒಪ್ಪಲಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ನಾವು ಪಾಲ್ಗೊಂಡಿದ್ದೇವೆ. ಹೀಗಿರುವಾಗ ಅಧಿಕಾರಿಗಳಿಂದ ಕೆಟ್ಟ ಮಾತು ಕೇಳಿಸಿಕೊಂಡು ನಾವು ಮುಂದುವರೆಯುವುದಿಲ್ಲ ಎಂದು ಹೇಳಿದ್ದಾರೆ. ತಕ್ಷಣವೇ ತಮ್ಮ ಎಲ್ಲಾ ಪರಿಕರಗಳನ್ನು ಪ್ಯಾಕ್ ಮಾಡಿಕೊಂಡು ತಮ್ಮೂರಿಗೆ ಮರಳಿದ್ದಾರೆ.

ಕ್ಷಮೆ ಕೇಳಿದ ಈಶ್ವರ್ ಮಲ್ಪೆ..
ಈಶ್ವರ್ ತಂಡ ಕಾರ್ಯಾಚರಣೆ ಸ್ಥಗಿತಗೊಳಿಸಿದ ಬಗ್ಗೆ ಅರಿತ ಕೇರಳದಿಂದ ಬಂದಿದ್ದ ಲಾರಿ ಮಾಲೀಕರು, ಅಲ್ಲಿನ ಮಾಧ್ಯಮಗಳು ಕಾರ್ಯಾಚರಣೆ ಮುಂದುವರೆಸುವಂತೆ ಮನವಿ ಮಾಡಿದ್ದಾರೆ. ಆದರೆ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ನಾಪತ್ತೆಯಾದವರನ್ನು ಹುಡುಕಿ ಅವರ ಕುಟುಂಬಕ್ಕೆ ನೀಡಬೇಕೆಂದು ಪಣತೊಟ್ಟು ಬಂದಿದ್ದೆವು. ಆದರೆ ನಮಗೆ ಸರಿಯಾದ ಸಹಕಾ ಸಿಗುತ್ತಿಲ್ಲ. ಕೆಟ್ಟ ಮಾತುಗಳನ್ನು ಕೇಳಿಸಿಕೊಂಡು ನಾವು ಮುಂದುವೆಯೋದಕ್ಕೆ ಮನಸ್ಸಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಕೈಮುಗಿದು ಮನವಿ ಮಾಡಿದರು.
ಸತೀಶ್ ಸೈಲ್ ಅವರು ನಮಗೆ ಸಹಕರಿಸಿದ್ದಾರೆ. ಆರಂಭದಿಂದಲೂ ನಮಗೆ ಜತೆಯಾಗಿದ್ದರು. ಆದರೆ ಅಧಿಕಾರಿಗಳಿಂದ ನಮಗೆ ಸಮಸ್ಯೆಯಾಗಿದೆ. ನಮಗೆ ಮುಕ್ತವಾಗಿ ಹುಡುಕಾಟಕ್ಕೆ ಅಧಿಕೃತವಾಗಿ ಪತ್ರ ಮುಖೇನ ಬೆದುಕೊಟ್ಟರೆ ಮಾತ್ರ ಮುಂದೆ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಾಗಿ ಈಶ್ವರ್ ಮಲ್ಪೆ ತಿಳಿಸಿದರು.



