ಬೆಂಗಳೂರು : ತಾವು ನೀಡಿದ್ದ ಹೇಳಿಕೆಯೊಂದರ ಪ್ರಕರಣ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮಿಳುನಾಡಿನ ಹೈಕೋರ್ಟ್‌ನಲ್ಲ ಕ್ಷಮೆಯಾಚಿಸಿದ್ದಾರೆ.
ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಪ್ರಕರಣ ಸಂಬಂಧ ಆರೋಪಿಗಳು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎಂದು ಹೇಳಿಕೆ ನೀಡಿದ್ದ ವಿಚಾರದಲ್ಲಿ ಮದುರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶೋಭಾ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಮಿಳುನಾಡು ಸರ್ಕಾರ ಸೇರಿದಂತೆ ಅಲ್ಲಿನ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಆಕ್ರೋಶ ಹೊರಹಾಕಿದ್ದರು.
ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಶೋಭಾ ಕರಂದ್ಲಾಜೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾ. ಜಿ. ಜಯಚಂದ್ರನ್ ನೇತೃತ್ವದ ನ್ಯಾಯಪೀಠದೆದುರು ಪ್ರಮಾಣ ಪತ್ರ ಸಲ್ಲಿಸಿರುವ ಶೋಭಾ ಕರಂದ್ಲಾಜೆ ತಮಿಳುನಾಡಿನ ಜನರ ಕ್ಷಮೆಯಾಚಿಸಿದ್ದಾರೆ. ನಾನು ನೀಡಿದ್ದ ಹೇಳಿಕೆಯಲ್ಲಿ ಯಾರದೇ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶವಿರಲಿಲ್ಲ. ಈಗಾಗಲೇ ನನ್ನ ಹೇಳಿಕೆಯನ್ನು ಹಿಂಪಡೆದಿದ್ದೇನೆ. ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಮಾಪಣೆಯನ್ನೂ ಕೋರಿದ್ದೇನೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ನನ್ನ ಹೇಳಿಕೆಯಿಂದ ನೋವಾಗಿದ್ದಕ್ಕೆ ತಮಿಳುನಾಡು ಜನರಿಗೆ ಕ್ಷಮೆ ಯಾಚಿಸುವೆ ಎಂದಿದ್ದಾರೆ.


