ವಯನಾಡ್(ಕೇರಳ) : ಕೇರಳದ ವಯನಾಡ್ ಜಿಲ್ಲೆಯಲ್ಲಿ ಜುಲೈ 30ರಂದು ನಡೆದ ಭೂಕುಸಿತ ನೂರಾರು ಕುಟುಂಬಗಳನ್ನು ಸರ್ವನಾಶ ಮಾಡಿ ಹಾಕಿತ್ತು. ಘೋರ ದುರಂತದ ನೋವಿನಿಂದ ಜನ ಇನ್ನೂ ಹೊರಬರೋದಕ್ಕೆ ಸಾಧ್ಯವಾಗುತ್ತಿಲ್ಲ. ಈ ನಡುವೆ ಚೂರಲ್ಮಲಾದ ನಿವಾಸಿಯಾಗಿದ್ದ ಯುವತಿಯೊಬ್ಬಳಿಗೆ ಎದುರಾದ ಆಘಾತ ಬರಸಿಡಿಲಿನಂತೆ ಬಂದೆರಗಿದೆ…
24 ವರ್ಷದ ಶ್ರುತಿ ಎಂಬಾಕೆ ವಯನಾಡ್ ದುರಂತದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡಿದ್ದರು. ಈ ನಡುವೆ ಆಕೆಯ ಭಾವಿ ಪತಿ, ಬಾಲ್ಯದ ಗೆಳೆಯ ಜೀನ್ಸನ್ ಆಕೆಯ ಭರವಸೆಯಾಗಿದ್ದ. ಕುಟುಂಬವನ್ನು ಕಳೆದುಕೊಂಡು ನೋವಲ್ಲಿದ್ದ ಆಕೆಗೆ ಜೀನ್ಸನ್ ಹೆಗಲಾಗಿದ್ದ. ಆದರೆ ಬುಧವಾರ ನಡೆದ ಅಪಘಾತವೊಂದರಲ್ಲಿ ಜೀನ್ಸನ್ ದುರ್ಮರಣಕ್ಕೀಡಾಗಿದ್ದಾನೆ. ಆ ಮೂಲಕ ಇದ್ದ ಒಂದು ಭರವಸೆಯೂ ಇಲ್ಲವಾಗಿ ಶ್ರುತಿಯ ಬಾಳು ಶೋಕಸಾಗರದಲ್ಲಿ ಮುಳುಗಿದೆ.

ಇಬ್ಬರು ಕೂಡಾ ಅನ್ಯಧರ್ಮದವರಾಗಿದ್ದರೂ, ಬಾಲ್ಯದಿಂದಲೂ ಸ್ನೇಹಿತರಾಗಿದ್ದ ಇಬ್ಬರ ಮದುವೆಗೆ ಎರಡು ಕುಟುಂಬಸ್ಥರು ಸಮ್ಮತಿಸಿದ್ದರು. ಅದರಂತೆ ಜೂನ್‌ನಲ್ಲಿ ಎಂಗೇಜ್ಮೆಂಟ್ ಕೂಡಾ ಆಗಿತ್ತು. ಚೂರಲ್ಮಲಾದಲ್ಲಿ ನಿರ್ಮಿಸಿದ್ದ ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಅದಾದ ಒಂದು ತಿಂಗಳಲ್ಲಿ ಘೋರ ದುರಂತದಲ್ಲಿ ಶ್ರುತಿಯ ಮನೆಯವರೆಲ್ಲ ಜೀವ ಕಳೆದುಕೊಂಡಿದ್ದರು.
ತನ್ನವರನ್ನು ಕಳೆದುಕೊಂಡ ನೋವಿನಿಂದ ಶ್ರುತಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಆದರೆ ಮಂಗಳವಾರ ಶಾಪಿಂಗ್‌ಗಾಗಿ ಇಬ್ಬರು ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಘವಿಸಿದೆ. ಓಮ್ನಿ ಕಾರು ಕಲ್ಪೆಟ್ಟ ಬಳಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಜೀನ್ಸನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಕೊನೆಯುಸಿರೆಳೆದಿದ್ದಾರೆ.


ವಯನಾಡ್ ದುರಂತ ವೇಳೆ ಇಬ್ಬರನ್ನು ಕೇರಳದ ರಿಪೋರ್ಟರ್ ಟಿವಿ ಸಂದರ್ಶಿಸಿತ್ತು. ಈ ವೇಳೆ ತಮ್ಮ ಬದುಕಿನ ಕನಸನ್ನು ವಾಹಿನಿ ಜತೆ ಮುಕ್ತವಾಗಿ ಹಂಚಿಕೊಂಡಿತ್ತು ಈ ಜೋಡಿ. ದಶಕದಿಂದ ನಾವು ಸ್ನೇಹಿತರಾಗಿದ್ದೇವೆ. ಆಕೆಯ ಜತೆಗೆ ನಾನು ಯಾವತ್ತೂ ಜತೆಗಿರುತ್ತೇನೆ. ಏಂದೂ ಒಂಟಿಯಾಗಲು ಬಿಡುವುದಿಲ್ಲ. ಮುಂದೆ ಹಂತಹಂತವಾಗಿ ಆಕೆಗೊಂದು, ಬದುಕಿಗೆ ಬೇಕಾದ ಅವಶ್ಯಕತೆಗಳನ್ನೆಲ್ಲ ಮಾಡಿಕೊಳ್ಳಬೇಕು. ಧೈರ್ಯಗುಂದದೆ ಜೀವನ ನಡೆಸಬೇಕು ಎಂದು ಜೀನ್ಸನ್ ಹೇಳಿದ್ದರು. ಆದರೆ ತನ್ನ ಬಗ್ಗೆ, ತನ್ನ ಗೆಳತಿ ಬಗ್ಗೆ ಕನಸು ಕಂಡಿದ್ದ ಜೀನ್ಸನ್ ಜೀವನ ದುರಂತದಲ್ಲಿ ಕೊನೆಯಾಗಿದೆ.

ವಯನಾಡ್ ಭೂಕುಸಿತದಲ್ಲಿ ಶ್ರುತಿ ತಂದೆ ಶಿವಣ್ಣ, ತಾಯಿ ಸವಿತಾ, ಸಹೋದರಿ ಶ್ರೇಯಾ ಜೀವ ಕಳೆದುಕೊಂಡಿದ್ದರು. ಶ್ರುತಿ ಕೋಝಿಕೋಡ್‌ನಲ್ಲಿ ಉದ್ಯೋಗದಲ್ಲಿದ್ದ ಕಾರಣ ದುರಂತದಿಂದ ಪಾರಾಗಿದ್ದರು. ಮದುವೆಗಾಗಿ ಮಾಡಿಸಿಟ್ಟಿದ್ದ ಚಿನ್ನ, ನಗದು ಕೂಡಾ ಮಣ್ಣು ಪಾಲಾಗಿತ್ತು. ಇದೀಗ ಶ್ರುತಿ ಒಬ್ಬಂಟಿಯಾಗಿದ್ದಾರೆ. ಈಕೆಗೆ ಇದೆಂಥಾ ಶಿಕ್ಷೆ ಅಂತ ಜನ ಮರುಗುತ್ತಿದ್ದಾರೆ. ನೋವಿನ ಮೇಲೆ ನೋವು ಅನುಭವಿಸುತ್ತಿರುವ ಶ್ರುತಿಗೆ ಯಾವ ರೀತಿ ಸಾಂತ್ವನ ಹೇಳೋದು, ಹೇಗೆ ಆಕೆಯನ್ನು ಸಮಾಧಾನಿಸುವುದು ಅನ್ನೋದು ಕೂಡಾ ಜನರಿಗೆ ತಿಳಿಯುತ್ತಿಲ್ಲ.




