ಬಾಳೆಹೊನ್ನೂರು : ಅರಣ್ಯ ಪ್ರದೇಶದಲ್ಲಿನ ಒತ್ತುವರಿ ತೆರವಿಗೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಮಲೆನಾಡು ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತೆರವು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ನಿರಂತರ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹೋರಾಟಕ್ಕೆ ಸ್ವಾಮೀಜಿಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ರೈತರು ನಡೆಸುವ ಹೋರಾಟದಲ್ಲಿ ಭಾಗಿಯಾಗುವುದಕ್ಕೆ ನಾವು ಸಿದ್ಧ ಎಂದು ರಂಭಾಪುರಿ ಸ್ವಾಮೀಜಿ, ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಘೋಷಿಸಿದ್ದಾರೆ.
ರಂಭಾಪುರಿ ಪೀಠದಲ್ಲಿ ಭಾನುವಾರ ಕರಾವಳಿ ಜನಪರ ಒಕ್ಕೂಟದ ವತಿಯಿಂದ ಸಭೆ ನಡೆಯಿತು. ವಿವಿಧ ಸಂಘಟನೆಗಳ ಮುಖಂಡರು, ಸ್ವಾಮೀಜಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಕೃತಿ ವಿಕೋಪ ಶತಮಾನಗಳಿಂದಲೂ ನಡೆಯುತ್ತಿದೆ. ವಯನಾಡಿನಲ್ಲಿ ಕೂಡಾ ದುರಂತ ನಡೆದಿದ್ದು ಇದೇ ಮೊದಲಲ್ಲ. ಕಾಡು ನಾಶವಾಗಿರುವುದು ಹೆಚ್ಚಿದ ನಗರೀಕರಣದಿಂದ. ರೈತರ ಚಟುವಟಿಕೆಗಳಿಂದ ಅಲ್ಲ ಅಂತ ಗುಣನಾಥ ಸ್ವಾಮೀಜಿ ಹೇಳಿದರು.
ಎಲ್ಲೋ, ಯಾವುದೋ ಭಾಗದಲ್ಲಿ ನಡೆದ ಘಟನೆಯನ್ನು ರೈತರ ತಲೆಗೆ ಕಟ್ಟುವುದು ಸರಿಯಾದ ನಡೆಯಲ್ಲ. ಸಂಕಷ್ಟಗಳ ಸರಮಾಲೆಯ ನಡುವೆಯೂ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಸಿಕೊಳ್ಳುತ್ತಾರೆ. ಒತ್ತುವರಿ ತೆರವು ವಿರೋಧಿಸಿ ರೈತರು ನಡೆಸುವ ಹೋರಾಟಕ್ಕೆ ಮಠದ ಪೂರ್ಣ ಬೆಂಬಲವಿದೆ ಎಂದು ಪ್ರಕಟಿಸಿದರು.
ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಕಂದಾಯ ಭೂಮಿಯನ್ನು ನೋಟಿಫಿಕೇಶನ್ ಅಡಿ ಅರಣ್ಯ ಇಲಾಖೆಗೆ ವರ್ಗಾಯಿಸಿ ಮಲೆನಾಡು ಭಾಗವನ್ನು ಜನರಹಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ವಕೀಲ, ಶಿರಸಿದ ರವೀಂದ್ರ ನಾರಾಯಣ ಮಾತನಾಡಿ, ಒತ್ತುವರಿ ತೆರವು ವಿಚಾರದಲ್ಲಿ ಜನಾಂದೋಲನ ನಡೆಯಬೇಕು. ಆ ಮೂಲಕ ಸರ್ಕಾರಕ್ಕೆ ಒತ್ತಡ ಹೇರಬೇಕು. ಈ ವಿಚಾರದಲ್ಲಿ ಶಿವಮೊಗ್ಗದಲ್ಲಿ ನ್ಯಾಯವಾದಿಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದರು.



