ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿ ಬರುವ ಐದು ನಗರ ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಹಲವು ವರ್ಷಗಳಿಂದ ಮುಂದೂಡಲ್ಪಡುತ್ತಿದ್ದ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಮೂಲಕ ಅಂತಿಮ ಗಡುವು ನಿಗದಿಯಾದಂತಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಫೆಬ್ರವರಿ 20ರೊಳಗೆ ಮೀಸಲಾತಿ ಅಧಿಸೂಚನೆಯನ್ನು ಅಂತಿಮಗೊಳಿಸಬೇಕು ಹಾಗೂ ಮಾರ್ಚ್ 16ರೊಳಗೆ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಮಾರ್ಚ್ ತಿಂಗಳಲ್ಲಿ ಶಾಲಾ-ಕಾಲೇಜು ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಮೇ 26ರೊಳಗೆ ಚುನಾವಣಾ ದಿನಾಂಕ ಘೋಷಿಸಿ ಜೂನ್ ಅಂತ್ಯದೊಳಗೆ ಪ್ರಕ್ರಿಯೆ ಮುಗಿಸಲು ಕಾಲಾವಕಾಶ ನೀಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ವಿಭಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ನಗರದ ಆಡಳಿತಾತ್ಮಕ ದೃಷ್ಟಿಯಿಂದ ಈ ಆದೇಶ ಅತ್ಯಂತ ನಿರ್ಣಾಯಕವಾಗಿದೆ.
