ಚಿಕ್ಕಮಗಳೂರು : ಶಸ್ತ್ರಾಸ್ತ್ರಗಳನ್ನು ತ್ಯಜಿಸಿ 06 ಮಂದಿ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬಂದ ಬೆಳವಣಿಗೆಯನ್ನು ಮಾಜಿ ನಕ್ಸಲ್ ಸಿರಿಮನೆ ನಾಗರಾಜು ಸ್ವಾಗತಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿದ ಅವರು, ನಕ್ಸಲರ ಶರಣಾಗತಿ ಪ್ರಕ್ರಿಯೆಯನ್ನು ಹಿಂದಿನಿಂದಲೂ ನಡೆಸಿದ್ದೆವು. ಈ ತಂಡ ನಮ್ಮ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸರ್ಕಾರದ ಸಮಿತಿ ಕೂಡಾ ಪ್ರಯತ್ನ ಮಾಡಿತ್ತು. ಶಾಂತಿಗಾಗಿ ನಾಗರೀಕ ವೇದಿಕೆ ಆಶ್ರಯದಲ್ಲಿ ನಾವೆಲ್ಲ ಸೇರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿಯನ್ನೂ ಕೊಟ್ಟಿದ್ದೆವು. ಅವರ ಕುಟುಂಬಸ್ಥರನ್ನೆಲ್ಲ ಸಂಪರ್ಕಿಸಿ ಅವರ ಸಂಪರ್ಕ ಸಾಧಿಸಿದ ಬಳಿಕ ಇಷ್ಟೆಲ್ಲ ಆಗಿದೆ ಎಂದರು.
ಶರಣಾಗದವರಲ್ಲಿ ಸಜಹವಾಗಿ ಆತಂಗಳಿದ್ದವು. ಸಮಿತಿ ಜೊತೆ ಚರ್ಚೆ ಮಾಡಿ ಸೂಕ್ತ ಆಶ್ವಾಸನೆ ಸಿಕ್ಕ ಬಳಿಕ ಅವರು ಶರಣಾಗಿದ್ದಾರೆ. ಅವರ ಜೀವ ಉಳಿದಿರೋದು ದೊಡ್ಡ ವಿಚಾರ. ಅವರೆಲ್ಲ ಬಡವರ ಪರವಾಗಿ ಪ್ರಾಣ ಒತ್ತೆ ಇಟ್ಟು ಹೋರಾಟ ಮಾಡುತ್ತಿದ್ದವರು. ಅವರೆಲ್ಲ ಕರ್ನಾಟಕಕ್ಕೆ ದೊಡ್ಡ ಆಸ್ತಿಯಾಗುತ್ತಾರೆ. ಸರ್ಕಾರ ಕೊಟ್ಟ ಆಶ್ವಾಸನೆಗಳನ್ನ ಈಡೇರಿಸಬೇಕು. ಮುಂಡುಗಾರು ಲತಾ ಈ ಹಿಂದೆ ನಮ್ಮ ಜೊತೆ ಕೆಲಸ ಮಾಡಿದವರು. ನಂತರ ನಾವು ಮುಖ್ಯವಾಹಿನಿಗೆ ಬಂದಿದ್ದೆವು. ಅವರು ಹೋರಾಟವನ್ನು ಮುಂದುವರೆಸಿದ್ದರು. ನಾವು ಬಂದ ಸಂದರ್ಭ ಸರ್ಕಾರ ಕೊಟ್ಟ ಭರವಸೆಗಳನ್ನು ಬಹುತೇಕ ಈಡೇರಿಸಿದೆ ಎಂದು ತಿಳಿಸಿದರು. ಅವರ ಸಂದರ್ಶನ ಸಂಪೂರ್ಣ ವೀಡಿಯೋವನ್ನು ನಮ್ಮ ಯೂಟ್ಯೂಬ್ ವಾಹಿನಿಯಲ್ಲಿ ವೀಕ್ಷಿಸಬಹುದು.