ಮುಂಬೈ : ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕು ಇರಿದ ಆರೋಪಿಯನ್ನು ಬಂಧಿಸಲಾಗಿದೆ. ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ಬಂಧೀತ ಆರೋಪಿಯಾಗಿದ್ದು, 5-6 ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ದೀಕ್ಷಿತ್ ಗೆಡಮ್, ಓರ್ವ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದೆ. ಈ ಆರೋಪಿ ಬಾಂಗ್ಲಾದೇಶದವನಾಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಅವನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲ. ಅವನು ಬಾಂಗ್ಲಾದೇಶದವನೆಂದು ನಾವು ಶಂಕಿಸಿದ್ದೇವೆ, ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಆರೋಪಿಯಿಂದ ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಅವನು ಭಾರತಕ್ಕೆ ಅಕ್ರಮವಾಗಿ ಬಂದು ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ. ಸುಮಾರು ನಾಲ್ಕು ತಿಂಗಳಿನಿಂದ ಮುಂಬೈ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಂತರ ಮನೆಗೆಲಸದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಬಾರಿಗೆ ಸೈಫ್ ನಿವಾಸ ಪ್ರವೇಶಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೇಳಿದರು.
