ಚಿಕ್ಕಮಗಳೂರು : ಸರ್ಕಾರಕ್ಕೆ ಸೇರಬೇಕಿದ್ದ ಹಣವನ್ನು ತನ್ನ ಪ್ರಿಯತಮೆ ಖಾತೆಗೆ ಜಮೆ ಆಗುವಂತೆ ಮಾಡಿ ಅರಣ್ಯಾಧಿಕಾರಿಯೊಬ್ಬರು ವಂಚಿಸಿರುವುದು ಬೆಳಕಿಗೆ ಬಂದಿದೆ. ವಂಚನೆ ಮಾಡಿದ ಅಧಿಕಾರಿಯನ್ನು ಅರಣ್ಯ ಇಲಾಖೆ ಅಮಾನತ್ತು ಮಾಡಿದೆ.
ಕಳಸ ಅರಣ್ಯ ವಿಭಾಗದ ಡಿಆರ್‌ಎಫ್‌ಒ ಚಂದನ್ ಗೌಡ ಅಮಾನತ್ತಾದ ಅಧಿಕಾರಿ. ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಟಿಕೆಟ್ ಹಾಗೂ ಚಾರಣದ ಟಿಕೆಟ್‌ನಲ್ಲಿ ಚಂದನ್ ವಂಚಿಸಿದ್ದಾರೆ ಎನ್ನಲಾಗಿದೆ. ನಕಲಿ ಟಿಕೆಟ್ ಮಾಡಿ ಪ್ರವಾಸಿಗರಿಗೆ ನೀಡಿ, ಆ ಹಣ ಖಾಸಗಿ ಖಾತೆಗೆ ಸೇರುವಂತೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮೇಲಧಿಕಾರಿಗಳು ತನಿಖೆ ನಡೆಸಿದ್ದು, 9000 ರೂ ಹಣ ವಂಚನೆಯಾಗಿರುವುದು ಸಾಬೀತಾಗಿದೆ.

ಅಧಿಕಾರಿಗಳು ತನಿಖೆ ಕೈಗೊಂಡಿದ್ದ ವೇಳೆ ಪ್ರವಾಸಿಗರ ನೋಂದಣಿ ಪುಸ್ತಕದಲ್ಲಿನ ಮಾಹಿತಿಗೂ, ಆನ್ಲೈನ್ ಟಿಕೆಟ್ ಬುಕ್ಕಿಂಗ್‌ನ ಮಾಹಿತಿಗೂ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಇನ್ನೂ ಹೆಚ್ಚಿನ ಹಣ ವಂಚನೆಯಾಗಿರುವ ಸಾಧ್ಯತೆಯಿದ್ದು, ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.


