ಮೂಡಿಗೆರೆ : ಜೋರಾಗಿ ಮಳೆ ಬಂದರೆ ಮಲೆನಾಡು ಭಾಗದಲ್ಲಿ ಹೆಂಚಿನ ಮನೆಗಳು ಸೋರುವುದು ಸಾಮಾನ್ಯ. ಆದರೆ ಈಗ ಸರ್ಕಾರಿ ಬಸ್‌ಗಳೂ ಸೋರುತ್ತವೆ.!
ದೊಡ್ಡಬಳ್ಳಾಪುರದಿಂದ ಹೊರನಾಡಿಗೆ ಸಂಚರಿಸಿದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಪೂರ್ಣ ನೀರು ಸೋರಿಕೆಯಾಗಿ ಜನ ಕುಳಿತುಕೊಳ್ಳುವುದಕ್ಕಾಗಿ ಪರದಾಡಿದ ಪ್ರಸಂಗ ನಡೆದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಸಾರಿಗೆ ಬಸ್ ಅನ್ನು ಹೊರನಾಡು ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಬಿಟ್ಟ ಪರಿಣಾಮ ಈ ಸಮಸ್ಯೆ ಎದುರಾಗಿತ್ತು. ಮಳೆ ಬಂದಾಗ ಮೊದಲ ಸೀಟ್‌ನಿಂದ ಕೊನೆಯ ಸೀಟ್‌ವರೆಗೆ ಎಲ್ಲಾ ಕಡೆ ನೀರು ಸೋರಿಕೆಯಾಗುತ್ತಿದ್ದ ಪರಿಣಾಮ ಪ್ರಯಾಣಿಕರೇ ಸೀಟ್ ಅನ್ನು ಒರೆಸಿಕೊಂಡು ಅಡ್ಜಸ್ಟ್ ಮಾಡಿ ಕುಳಿತುಕೊಂಡರು.
ಈ ಬಗ್ಗೆ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಅಸಮಾಧಾನ ಹೊರಹಾಕಿದ್ದು, ಡಿಪೋ ಅಧಿಕಾರಿಗಳನ್ನ ಈ ಬಗ್ಗೆ ಪ್ರಶ್ನಿಸಿದರೆ ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಮಲೆನಾಡು ಭಾಗಕ್ಕೆ ಸೋರುವ ಬಸ್‌ಗಳನ್ನು ಕಳುಹಿಸದಂತೆ ಮಲೆನಾಡಿನ ಭಾಗಕ್ಕೆ ಕಳಿಸಬಾರದು ಎಂದು ಆಗ್ರಹಿಸಿದ್ದಾರೆ.



