ಬೆಂಗಳೂರು : ಮಹಾತ್ಮ ಗಾಂಧಿಯವರನ್ನ ನೀವು ಗುಂಡಿಟ್ಟು ಕೊಂದಿರಬಹುದು. ಆದರೆ ಅವರ ಮೌಲ್ಯಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನಾವು ನಿಜವಾಗಿ ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸುವುದು ಅಂದ್ರೆ ಯಾವ ಮೌಲ್ಯಗಳಿಗಾಗಿ ಅವರು ಹೋರಾಟ ಮಾಡಿದರೋ ಆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದೇಶ ಸಮಾಜ ಕಟ್ಟುವ ಕೆಲಸ ಮಾಡಿದಾಗ ಮಾತ್ರ ಗಾಂಧೀಜಿಗೆ ಗೌರವ ಕೊಟ್ಟು ಅದಕ್ಕೊಂದು ಅರ್ಥ ಬರುತ್ತದೆ ಎಂದರು.
ಗಾಂಧೀಜಿಯವರು ಎಲ್ಲ ಧರ್ಮಗಳನ್ನ, ಭಾಷೆಗಳನ್ನ ಗೌರವಿಸುತ್ತಿದ್ದರು. ಬೇರೆ ಧರ್ಮದ ಬಗ್ಗೆ ಅವರಿಗೆ ಸಹಿಷ್ಣುತೆ ಇತ್ತು. ನಾವೆಲ್ಲರೂ ಕೂಡ ಬೇರೆ ಧರ್ಮ ಬೇರೆ ಭಾಷೆ ಬಗ್ಗೆ ಸಹಿಷ್ಣುತೆ ಇಟ್ಟುಕೊಳ್ಳಬೇಕು. ವೈವಿದ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಯಾವ ಧರ್ಮ ಮೇಲಲ್ಲ, ಯಾವುದೂ ಕೀಳಲ್ಲ. ಯಾವುದೇ ಜಾತಿ ಮೇಲಲ್ಲ, ಯಾವುದೂ ಕೀಳಲ್ಲ ಎಂದರು.
ಸಂವಿಧಾನ ರಕ್ಷಣೆ ಮಾಡಬೇಕಾಗಿದ್ದು ನಮ್ಮ ಕರ್ತವ್ಯ. ಕೆಲವು ಮತಾಂಧ ಶಕ್ತಿಗಳು ನಮ್ಮ ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡ್ತಿದ್ದಾರೆ. ಹೀಗಾಗಿ ಸಂವಿಧಾನ ರಕ್ಷಣೆ ಆದ್ರೆ ನಮ್ಮೆಲ್ಲರ ರಕ್ಷಣೆ ಆಗುತ್ತದೆ. ಬಿಜೆಪಿಯವರು ದೇಶವನ್ನು ಹಿಂದೂಸ್ಥಾನ, ಹಿಂದೂರಾಷ್ಟ್ರ ಮಾಡ್ತಿವಿ ಅಂತ ಹೊರಟಿದ್ದಾರೆ. ಏಕ ಭಾಷೆ ಏಕ ಸಂಹಿತೆ ಜಾರಿಗೆ ತರಲು ಹೊರಟ್ಟಿದ್ದಾರೆ. ನಾವು ಪ್ರಜಾಪ್ರಭುತ್ವ ಉಳಿಸಬೇಕು ಪ್ರಜಾಪ್ರಭುತ್ವ ರಕ್ಷಣೆ ರಕ್ಷಣೆ ಮಾಡಬೇಕು. ನಾವೆಲ್ಲರೂ ಈಗ ಎರಡನೇ ಹೋರಾಟವನ್ನು ಮಾಡಬೇಕಿದೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಮಾತ್ರ ಸಂವಿಧಾನ ಉಳಿಸಲು ಸಾಧ್ಯ. ಕಾರ್ಯಕರ್ತರಿಗೆ ಇದು ಅತ್ಯಂತ ಅಗತ್ಯ ಮತ್ತು ಅನಿವಾರ್ಯತೆಯಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಗಾಂಧಿಯನ್ನು ಕೊಂದವರನ್ನು ಆರಾಧಿಸುತ್ತಿದ್ದಾರೆ. ಗೋಡ್ಸೆ ಒಬ್ಬ ಹಂತಕ, ಮತಾಂಧ ಅವನನ್ನು ಆರೆಸ್ಸೆಸ್‌ನವರು ಪೂಜಿಸುತ್ತಾರೆ. ಹಿಂದೆ ಗೋಳವಾಲ್ಕರ್ ‘ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ’ ಎಂದಿದ್ದರು. ಈಗಿನ ಆರೆಸ್ಸೆಸ್ ಬಿಜೆಪಿ ಸಂವಿಧಾನವನ್ನೇ ರೀರೈಟ್ ಮಾಡಿ ಮನುಸ್ಮೃತಿ ತರಲು ಹೊರಟಿದೆ. ಹೀಗಾಗಿ ನಾವು ಸಂವಿಧಾನ ವಿರೋಧಿಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಗಾಂಧಿಯನ್ನು ಗುಂಡಿಟ್ಟು ಕೊಂದಿರಬಹುದು, ಅವರ ಮೌಲ್ಯಗಳನ್ನು ಕೊಲ್ಲಲು ಸಾಧ್ಯವಿಲ್ಲ- ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ಬಾಣ..!
RELATED ARTICLES