ಕೊಪ್ಪಳ : ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಸಿನಿಮಾ ಶೂಟಿಂಗ್ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಪರವಾನಗಿ ಪಡೆಯದೆ ಚಿತ್ರೀಕರಣ ಮಾಡುತ್ತಿದ್ದ ಚಿತ್ರ ತಂಡಕ್ಕೆ ಜಿಲ್ಲಾಡಳಿತ ತಡೆವೊಡ್ಡಿದ್ದು, ಶೂಟಿಂಗ್ ನಡೆಸದಂತೆ ಸೂಚಿಸಿದೆ.
ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಪುತ್ರ ಜೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಚಿತ್ರೀಕರಣವನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರ, ರಂಗಾಪುರ ಗ್ರಾಮದ ಬಳಿ ನಡೆಸಲಾಗುತ್ತಿತ್ತು. ಇದಕ್ಕಾಗಿ ಸ್ಥಳೀಯಾಡಳಿತ, ಜಿಲ್ಲಾಡಳಿತದಿಂದ ಯಾವುದೇ ಅನುಮತಿಯನ್ನು ಪಡೆದುಕೊಂಡಿರಲಿಲ್ಲ. ಸಿನಿಮಾ ಶೂಟಿಂಗ್ ನಡೆಯುತ್ತಿರುವ ಸಮಯದಲ್ಲಿಯೇ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಥಳದ ಹಿನ್ನೆಲೆ ಹೊಂದಿರುವ ಸ್ಥಳದಲ್ಲಿ ಚಿತ್ರೀಕರಣ ಮಾಡಲು ಪರವಾನಗಿ ಪಡೆದುಕೊಂಡಿಲ್ಲ. ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಇಲ್ಲಿ ಚಿತ್ರೀಕರಣ ಮಾಡುವಂತಿಲ್ಲ ಎಂದು ತಾತ್ಕಾಲಿಕವಾಗಿ ತಡೆ ನೀಡಲಾಗಿದೆ.
ಅಧಿಕಾರಿಗಳ ಈ ಕ್ರಮದಿಂದ ಏನೂ ಮಾಡಲಾಗದೇ ಸಿನಿಮಾ ಶೂಟಿಂಗ್ ಮಾಡುವುದಕ್ಕೆ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳಲಾಗಿದೆ. ಚಿತ್ರೀಕರಣ ಮಾಡುತ್ತಿದ್ದ ಜಾಗದ ಸುತ್ತಲಿನ ಪ್ರದೇಶವನ್ನು ಕೊಪ್ಪಳ ಜಿಲ್ಲಾಡಳಿತದಿಂದ ನೀರು ನಾಯಿ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಟ್ ಸಿನಿಮಾ ಚಿತ್ರಿಕರಣಕ್ಕೆ ಅರಣ್ಯ ಅಧಿಕಾರಿಗಳು ತಡೆ ತಂದಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಕಾಂತಾರ ೦೧ ಚಿತ್ರೀಕರಣ ವೇಳೆ ಉಂಟಾದ ಸಮಸ್ಯೆ ಬಳಿಕ ಸೂಕ್ಷ್ಮ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬೇಕಾದ್ರೆ ಅಗತ್ಯ ಅನುಮತಿಯನ್ನು ಪಡೆದುಕೊಳ್ಳಬೇಕೆಂದು ಸರ್ಕಾರ ಸೂಚಿಸಿದೆ.
