ಬೆಂಗಳೂರು : ಬಿಗ್ ಬಾಸ್ ಕನ್ನಡ ೧೧ರ ಸ್ಪರ್ಧಿಯಾಗಿದ್ದ ವಕೀಲ ಜಗದೀಶ್ ಸಾರ್ವಜನಿಕರಿಂದ ಗೂಸಾ ತಿಂದು ಸುದ್ದಿಯಾಗಿದ್ದರು. ಇದೀಗ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ಕೆಂಡಕಾರಿದ್ದಾರೆ. ಫೇಸ್‌ಬುಕ್ ಲೈವ್ ಬಂದಿರುವ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆದಿದ್ದಾರೆ. ‘ಡಿ’ಬಾಸ್ ಬಾಯ್ಸ್ ಸ್ವಲ್ಪ ಅಮ್ಮಿಕಂಡಿರಿ; ನೀವೊಬ್ಬರೇ ಗಂಡ್ಸಾ? ಬೇರೆಯವರು ಬಳೆ ತೊಟ್ಟುಕೊಂಡಿದ್ದಾರಾ? ನನಗೆ ಮೆಸೇಜ್ ಮಾಡುವುದಕ್ಕೂ ಮುನ್ನ, ನನ್ನನ್ನು ಟ್ರೋಲ್ ಮಾಡುವುದನ್ನೂ ಮುನ್ನ ಎಚ್ಚರದಿಂದಿರಿ. ನನಗೆ ಗೌರವ ಕೊಡದಿದ್ದರೆ, ನಿಮಗೆ ಹೇಗೆ ಗೌರವ ಬಿಟ್ಟು ಮಾತನಾಡಬೇಕು ಅನ್ನೋದು ಗೊತ್ತಿದೆ ಅಂತ ವಾರ್ನ್ ಮಾಡಿದ್ದಾರೆ.
ದರ್ಶನ್ ಬೇಲ್ ವಿಚಾರವಾಗಿಯೂ ಲೈವ್‌ನಲ್ಲಿ ಮಾತನಾಡಿದ್ದಾರೆ. ಹೈಕೋರ್ಟ್ ಜಾಮೀನು ಕೊಟ್ಟಿರುವುದು ತಪ್ಪು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ದರ್ಶನ್ ಸೇರಿ 7 ಜನರಿಗೆ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದ ಬೆನ್ನಲ್ಲಿಯೇ ಮುಂದಿನ ದಿನಗಳಲ್ಲಿ ದರ್ಶನ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದುಗೊಳಿಸುವ ಸಾಧ್ಯತೆ ಹೆಚ್ಚಾಗಿದೆ. ಡಿ-ಬಾಸ್ ಗ್ಯಾಂಗ್ ಇದಕ್ಕೆಲ್ಲಾ ನೀವು ಏನು ಮಾಡ್ತೀರಪ್ಪಾ? ನೀವೇನೂ ಮಾಡೋದಕ್ಕೆ ಆಗೊಲ್ಲ, ಇದು ಕಾನೂನು ಪ್ರಕ್ರಿಯೆ ಇದನ್ನು ಎಲ್ಲರೂ ಪಾಲಿಸಲೇಬೇಕು ಎಂದಿರುವ ಜಗದೀಶ್, ನಟ ದರ್ಶನ್‌ಗೆ ಮುಂದಿನ ದಿನಗಳಲ್ಲಿ ಬಿಗ್ ಸರ್ಪೈಸ್ ಎದುರಾಗಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದಾದರೆ ಪುನಃ ಜೈಲು ಸೇರುವುದು ಗ್ಯಾರಂಟಿ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವಂತೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಆದರೆ, ನಾನು ದರ್ಶನ್ ಜೈಲಿಗೆ ಹೋಗುತ್ತಾನೆ ಎಂದು ಹೇಳಿ ಟ್ರೋಲ್ ಆಗುವುದಕ್ಕೆ ಹೋಗುವುದಿಲ್ಲ. ದರ್ಶನ್‌ಗೆ ಒಳ್ಳೆಯದಾಗಲಿ. ಹೆಂಡತಿ ಮಕ್ಕಳೊಂದಿಗೆ ಸುಖವಾಗಿರಲಿ. ಅವರ ಎಲ್ಲ ಅಭಿಮಾನಿಗಳೂ ಸಂತಸದಿಂದಿರಲಿ ಅಂತ ಹಾರೈಸಿದ್ದಾರೆ ಕೂಡಾ.
