ರಾಯಚೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದೆ. ಸಾಲ ಪಡೆದ ಅನೇಕ ಕುಟುಂಬಗಳು ವಿಳಾಸ ಪತ್ತೆಯಾಗದ ರೀತಿ ಬೇರೆ ಕಡೆ ಸ್ಥಳಾಂತರವಾದ ಅನೇಕ ನಿದರ್ಶನಗಳಿವೆ. ಈ ಮಧ್ಯೆ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೊಬ್ಬರ ಪತ್ನಿ ವಿಭಿನ್ನವಾಗಿ ತಮ್ಮ ಆಕ್ರೋಶ ಹೊರಹಾಕಿ ಪ್ರತಿಭಟಿಸಿದ್ದಾರೆ. ತನ್ನ ಮಾಂಗಲ್ಯ ಸರವನ್ನು ಗೃಹಸಚಿವರಿಗೆ ಕಳುಹಿಸಿಕೊಟ್ಟು ಪತಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಈ ಘಟನೆ ನಡೆದಿರೋದು ರಾಯಚೂರು ಜಿಲ್ಲೆಯಲ್ಲಿ. ಫೈನಾನ್ಸ್ ಕಿರುಕುಳದಿಂದ ಜನವರಿ 17 ರಂದು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಶರಣಬಸವ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶರಣಬಸವನಿಗೆ ಸಾಲ ಕೊಟ್ಟಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಟಾರ್ಚರ್ ಕೊಡುತ್ತಿದ್ದರಂತೆ. ಕೂಲಿ ಕೆಲಸ ಮಾಡುತ್ತಿದ್ದ ಈತ ಕೆಲ ಖಾಸಗಿ ಕಂಪನಿಗಳಿಂದ 6-8 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಶರಣಬಸವನ ಪತ್ನಿ ಪಾರ್ವತಿ, ಮಕ್ಕಳು ಹಾಗೂ ಕುಟುಂಬಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ಅದರ ಭಾಗವಾಗಿ ಶರಣಬಸವನ ಪತ್ನಿ ಪಾರ್ವತಿ ತನ್ನ ಮಾಂಗಲ್ಯ ಸರವನ್ನ ಗೃಹ ಸಚಿವರಿಗೆ ರವಾನಿಸಿದ್ದಾರೆ. ನನ್ನ ಪತಿ ಸಾಲ ಮಾಡಿದ್ದಕ್ಕೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಅದರ ವಿರುದ್ಧ ಕ್ರಮವಾಗಬೇಕು ಅಂತ ಆಗ್ರಹಿಸಿ ಪೋಸ್ಟ್ ಮೂಲಕ ಸರ ಕಳುಹಿಸಿದ್ದಾರೆ. ಜೊತೆಗೆ ಜಿಲ್ಲಾ ಎಸ್ಪಿಗೂ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಯಾವ ರೀತಿ ಪರಿಗಣಿಸುತ್ತೆ ಅನ್ನೋದು ಸದ್ಯದ ಕುತೂಹಲ.
