ಬಾಳೆಹೊನ್ನೂರು : ಸರ್ಕಾರಿ ಕಟ್ಟಡಗಳೆಂದ್ರೆ ಅದು ಸರ್ಕಾರಕ್ಕೆ ಸಂಬಂಧಿಸಿದ್ದು, ಎಲ್ಲವನ್ನೂ ಸರ್ಕಾರವೇ ನೋಡಿಕೊಳ್ಳಬೇಕೆಂಬ ಮನೋಭಾವನೆ ಜನಸಮೂಹದಲ್ಲಿದೆ. ಇಂಥ ಮನಸ್ಥಿತಿಯ ನಡುವೆ ಯುವಕರ ಸಂಘವೊಂದು ಸರ್ಕಾರಿ ಆಸ್ಪತ್ರೆಗೆ ಸುಣ್ಣ ಬಣ್ಣ ಬಳಿದು ಜನ ಮೆಚ್ಚುವ ಕೆಲಸ ಮಾಡಿದೆ.
ಬಾಳೆಹೊನ್ನೂರಿನಲ್ಲಿ ಸರ್ಕಾರಿ ಆಸ್ಪತ್ರೆ ಇದೆ. ಕೂಲಿ ಕಾರ್ಮಿಕ ವರ್ಗದವರೇ ಹೆಚ್ಚಿರುವ ಈ ಭಾಗದಲ್ಲಿ ಹೆಚ್ಚಿನ ಜನ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆಸ್ಪತ್ರೆಯ ಬಣ್ಣ ಮಾಸಿದ್ದ ಗೋಡೆಗಳಿಗೆ ಇಲ್ಲಿ ಭದ್ರಾ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಪೇಂಟಿಂಗ್ ಮಾಡಲಾಗಿದೆ. ಸ್ಪೋರ್ಟ್ಸ್ ಕ್ಲಬ್ ಅಂದ್ರೆ ಕೇವಲ ಕ್ರೀಡಾಕೂಟಗಳನ್ನ ಆಯೋಜನೆಗೆ ಮಾತ್ರ ಸೀಮಿತ ಅಲ್ಲ. ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕೆಂಬುದನ್ನು ಭದ್ರಾ ಸ್ಫೋರ್ಟ್ಸ್ ಕ್ಲಬ್ ತೋರಿಸಿದೆ.
ಕೆಲ ವರ್ಷದ ಹಿಂದೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅಂದಾಜು ಆರು ಲಕ್ಷ ರೂ. ವೆಚ್ಚದಲ್ಲಿ ಜನರೇಟರ್ ವ್ಯವಸ್ಥೆಯನ್ನು ಈ ಕ್ಲಬ್ ವತಿಯಿಂದ ಕಲ್ಪಿಸಲಾಗಿತ್ತು. ಇದೀಗ ಸುಣ್ಣ-ಬಣ್ಣ ಬಳಿಯುವ ಮೂಲಕ ಮತ್ತೊಮ್ಮೆ ಜನಮೆಚ್ಚುವ ಕೆಲಸ ಮಾಡಿದೆ. ಕ್ಲಬ್‌ನ ಈ ಕಾರ್ಯಕ್ಕೆ ಈ ಭಾಗದ ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
