ಹಾಸನ : ಜಿಲ್ಲೆಯಲ್ಲಿ ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸರ್ವೆ, ಪೋಡಿ, ಖಾತೆ ಹೆಸರಿನಲ್ಲಿ ರೈತರಿಂದ ಹಣ ವಸೂಲಿ ದಂಧೆ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಪೋಡಿ ಮುಕ್ತ ಗ್ರಾಮ ಮಾಡಬೇಕೆಂದು ಹೇಳಿದೆ. ಜಿಲ್ಲಾಡಳಿತ ಅಧಿಕಾರಿಗಳು ಒಂದು ಕುಂಟೆಗೆ ಪೋಡಿ ಮಾಡುವುದಕ್ಕೆ ೮೫೦ ರೂ ನಿಗದಿ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರುಗಳಿಗೂ ತಲುಪಿಸುವ ವ್ಯವಸ್ಥೆ ಇದೆ. ಜಿಲ್ಲೆಯ ವಿವಿಧೆಡೆ ಕಂದಾಯ ಇಲಾಖೆ ಅಧಿಕಾರಿಗಳು ರೈತರ ರಕ್ತ ಹೀರುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ಕೆಳ ಹಂತದ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಜಮೀನು ಖಾತೆ ಮಾಡುವ ಎಲ್ಲಾ ಹಂತದಲ್ಲಿಯೂ ಇಂತಿಷ್ಟು ಹಣ ಪಡೆದು ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಡೆಯುತ್ತಿದೆ. ಅಧಿಕಾರಿಗಳು ಪಡೆದ ಹಣವನ್ನು ಕಾಂಗ್ರೆಸ್ ಮುಖಂಡರು ಪಡೆದು ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳು ಇದರಲ್ಲಿ ಪ್ರಮುಖ ರುವಾರಿಯಾಗಿದ್ದು, ಅವರ ಲಂಚಗುಳಿತನದ ಬಗ್ಗೆ ದಾಖಲೆಗಳು ಲಭ್ಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಂಡಿಗನಹಳ್ಳಿ ಹೋಬಳಿ ಅಣ್ಣೇಗೌಡ, ನಂದೀಶ್, ವೆಂಕಟೇಶ್, ನಂಜೆಗೌಡ, ಚಂದ್ರೇಗೌಡ ಇತರರು ಉಪಸ್ಥಿತರಿದ್ದರು.
ಸರ್ವೆ, ಪೋಡಿ, ಖಾತೆ ಹೆಸರಿನಲ್ಲಿ ರೈತರಿಂದ ಹಣ ವಸೂಲಿ ದಂಧೆ – ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಆರೋಪ
RELATED ARTICLES