ನಟ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂಬುದು ಅಭಿಮಾನಿಗಳು ಹಾಗೂ ಕುಟುಂಬದವರ ಒತ್ತಾಯ ಆಗಿತ್ತು. ಆ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ. ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರಿಗೆ ಮರಣೋತ್ತವರಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಈ ಸುದ್ದಿ ತಿಳಿದ ಕೂಡಲೇ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಎಲ್ಲರೂ ಸಂಭ್ರಮಿಸುತ್ತಿದ್ದಾರೆ.
ಅಭಿಮಾನಿಗಳ ಪಾಲಿಗೆ ವಿಷ್ಣುವರ್ಧನ್ ಅವರು ಕೋಟಿಗೊಬ್ಬ. ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ. ‘ಕೋಟಿಗೊಬ್ಬ’ ಸಿನಿಮಾದ ಹಾಡಿನ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
