ಮಂಡ್ಯ : ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾಸಮರ ಅಂತಿಮ ಘಟ್ಟಕ್ಕೆ ತಲುಪಿದೆ. ಈ ಬಾರಿಯ ಟ್ರೋಫಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಮನೆಮಾತಾಗಿರುವ ಬೆನ್ನಲ್ಲೇ, ಸ್ಪರ್ಧಿ ಗಿಲ್ಲಿ ಪರವಾಗಿ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕೇವಲ ವೋಟಿಂಗ್ಗೆ ಸೀಮಿತವಾಗದ ಈ ಅಭಿಮಾನ, ಈಗ ಟ್ಯಾಟೂ ಮತ್ತು ಬ್ಯಾನರ್‌ಗಳ ಮೂಲಕ ಗಲ್ಲಿ ಗಲ್ಲಿಯಲ್ಲೂ ಮೊಳಗುತ್ತಿದೆ.
ಕೈ ಮೇಲೆ ಗಿಲ್ಲಿ ಟ್ಯಾಟೂ – ಅಭಿಮಾನದ ಪರಾಕಾಷ್ಠೆ
ಮಂಡ್ಯ ಮೂಲದ ಶಶಿಕುಮಾರ್ ಎಂಬ ಅಭಿಮಾನಿ, ಗಿಲ್ಲಿ ಮೇಲಿನ ಪ್ರೀತಿಗಾಗಿ ಬೆಂಗಳೂರಿಗೆ ಆಗಮಿಸಿ ತಮ್ಮ ಕೈ ಮೇಲೆ ಗಿಲ್ಲಿ ಪೋಟ್ರೇಟ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. “ಬಡತನದಿಂದ ಬಂದ ಗಿಲ್ಲಿಗೆ ದೈವಬಲವಿದೆ, ಅವರೇ ಈ ಬಾರಿ ವಿನ್ನರ್” ಎಂದು ಶಶಿಕುಮಾರ್ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಳವಳ್ಳಿ ನಟರಾಜ ಅಲಿಯಾಸ್ ಗಿಲ್ಲಿ ಅವರ ನಿಷ್ಕಲ್ಮಶ ಆಟಕ್ಕೆ ಅಭಿಮಾನಿಗಳು ಈ ಮೂಲಕ ಸಾಟಿಯಿಲ್ಲದ ಗೌರವ ಸಲ್ಲಿಸುತ್ತಿದ್ದಾರೆ.
ಬ್ಯಾನರ್ ಮತ್ತು ಕಟೌಟ್ ಅಬ್ಬರ
ಮಂಡ್ಯ, ಮಳವಳ್ಳಿ ಸೇರಿದಂತೆ ಹಳೆ ಮೈಸೂರು ಭಾಗದಾದ್ಯಂತ ಗಿಲ್ಲಿ ಪರವಾಗಿ ಬೃಹತ್ ಬ್ಯಾನರ್‌ಗಳು ರಾರಾಜಿಸುತ್ತಿವೆ. “ಮಂಡ್ಯದ ಗಂಡು-ಬಿಗ್ ಬಾಸ್ ವಿನ್ನರ್”, “ಗಲ್ಲಿಯಿಂದ ಬಿಗ್ ಬಾಸ್ ಗಲ್ಲಿವರೆಗೆ ಗಿಲ್ಲಿ ಹವಾ” ಎಂಬ ಬರಹಗಳಿರುವ ಲೀಡ್ ಬ್ಯಾನರ್‌ಗಳನ್ನು ಹಾದಿಬೀದಿಗಳಲ್ಲಿ ಹಾಕಲಾಗುತ್ತಿದೆ. ಹಳ್ಳಿಯ ಸೊಗಡಿನ ಮಾತಿನ ಮೂಲಕವೇ ಕಿಚ್ಚ ಸುದೀಪ್ ಅವರ ಮನ ಗೆದ್ದಿರುವ ಗಿಲ್ಲಿಗೆ, ಈ ಬಾರಿ ಟ್ರೋಫಿ ಖಚಿತ ಎಂಬ ವಾತಾವರಣ ಸೃಷ್ಟಿಯಾಗಿದೆ.
ಫಿನಾಲೆ ಫೈಟ್ – ಯಾರಿಗೆ ಟ್ರೋಫಿ?
ಜನವರಿ 18ರಂದು ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ಅವರಿಗೆ ಧನುಷ್ ಗೌಡ ಮತ್ತು ರಕ್ಷಿತಾ ಶೆಟ್ಟಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಆದರೂ, ವೋಟಿಂಗ್ ಟ್ರೆಂಡ್‌ನಲ್ಲಿ ಗಿಲ್ಲಿ ಅವರೇ ಮುಂಚೂಣಿಯಲ್ಲಿದ್ದಾರೆ. ಸುದೀಪ್ ಅವರು ಮೆಚ್ಚಿಕೊಂಡ ಈ ‘ಸೈಲೆಂಟ್ ಕಿಲ್ಲರ್’ ಜನವರಿ 18ರಂದು ಟ್ರೋಫಿ ಎತ್ತಿ ಹಿಡಿಯುತ್ತಾರಾ ಎಂಬ ಕುತೂಹಲಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
