ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ತನ್ನ ನೈಜ ಅಭಿನಯದಿಂದಾಗಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲು ಬ್ಯುಸಿ ಇರುವ ನಟಿ ವೈಷ್ಣವಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಫೈನ್ ಹಾಕಿದ್ದಾರೆ .
ಏನಿದು ಘಟನೆ?
ಜೀ ಟಿವಿಯ ಜನಪ್ರಿಯ ಧಾರವಾಹಿ ಸೀತಾರಾಮದಲ್ಲಿ , ನಟಿ ವೈಷ್ಣವಿ ದ್ವಿಚಕ್ರ ವಾಹನ ಓಡಿಸುವ ದೃಶ್ಯವನ್ನು ಇತ್ತೀಚೆಗಷ್ಟೇ ಶೂಟ್ ಮಾಡಲಾಗಿತ್ತು. ಈ ಶೂಟಿಂಗ್ ಸಂದರ್ಭದಲ್ಲಿ ನಟಿ ಹೆಲ್ಮೆಟ್ ಧರಿಸದೇ ರಸ್ತೆಯಲ್ಲಿ ದ್ವಿಚಕ್ರ ವಾಹನ ಓಡಿಸಿದ್ದರು. ಹೀಗಾಗಿ ಇವ್ರು ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದಾರೆ ಅನ್ನೋ ಆರೋಪದಡಿಇವರ ವಿರುದ್ಧ ದೂರು ದಾಖಲಾಗಿತ್ತು. ಸೀತಾರಾಮ ಧಾರಾವಾಹಿಯ ಈ ದೃಶ್ಯದ ಬಗ್ಗೆ ಕರ್ನಾಟಕದ ಮಂಗಳೂರಿನ ಜಯಪ್ರಕಾಶ್ ಎಕ್ಕೂರು ಎಂಬ ವೀಕ್ಷಕರು ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಹೆಲ್ಮೆಟ್ ಇಲ್ಲದ ಬಗ್ಗೆ ದೂರು ದಾಖಲಿಸಿದ್ದರು. ಅಲ್ಲದೇ ಈ ದೃಶ್ಯವು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತಿದೆ, ಹೀಗಾಗಿ ನಟಿ, ಧಾರಾವಾಹಿಯ ನಿರ್ದೇಶಕ ಮತ್ತು ಚಾನೆಲ್ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇಂತಹ ಸನ್ನಿವೇಶಗಳು ಪ್ರೇಕ್ಷಕರ ಮೇಲೆ ಹಾನಿಕಾರಕ ಪ್ರಭಾವ ಬೀರಬಹುದು, ಇದು ಸಂಚಾರ ನಿಯಮಗಳ ನಿರ್ಲಕ್ಷ್ಯವನ್ನು ಉತ್ತೇಜಿಸುತ್ತದೆ ಎಂದೂ ದೂರು ದಾಖಲಿಸಿದ್ದರು.

ಮಂಗಳೂರು ನಗರ ಪೊಲೀಸರು ಇವರ ದೂರು ಸ್ವೀಕರಿಸಿದ ಬಳಿಕ ಈ ಪ್ರಕರಣವನ್ನು ಮಂಗಳೂರು ಪೂರ್ವ ಸಂಚಾರ ಠಾಣೆಗೆ ವರ್ಗಾಯಿಸಿದ್ದರು. ದೂರಿನ ಮೇರೆಗೆ ವೈಷ್ಣವಿ ಮತ್ತು ಜಿ ವಾಹಿನಿಗೆ ನೋಟೀಸ್ ನೀಡಲಾಗಿತ್ತು. ತನಿಖೆಯ ನಂತರ ಈ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಚಿತ್ರೀಕರಿಸಲಾಗಿತ್ತು ಎಂದು ತಿಳಿದು ಈ
ಕೇಸನ್ನು ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಮೇ 10 ರಂದು ರಾಜಾಜಿನಗರ ಪೊಲೀಸರು ನಟಿ ವೈಷ್ಣವಿ ಮತ್ತು ವಾಹನದ ಮಾಲೀಕರಿಗೆ ತಲಾ 500 ರೂ.ಗಳ ದಂಡ ವಿಧಿಸಿದ್ದರು.
ಈ ವೇಳೆ ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ , ಭವಿಷ್ಯದ ಎಪಿಸೋಡ್ಗಳು ಸಂಚಾರ ನಿರ್ಬಂಧಗಳನ್ನು ಅನುಸರಿಸುತ್ತವೆ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದರು .ಈ ಘಟನೆಯು ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ, ವಿಶೇಷವಾಗಿ ಹೆಲ್ಮೆಟ್ ಕಡ್ಡಾಯ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಮಹತ್ವವನ್ನು ಒತ್ತಿಹೇಳುತ್ತದೆ.