ತೆಲುಗು ಚಿತ್ರರಂಗದ ಉದಯೋನ್ಮುಖ ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಸ್ವಯಂಭು ಟೀಸರ್ ಬಿಡುಗಡೆಯಾಗಿದೆ. ಶಿವನು ಶ್ರೀರಾಮನಿಗೆ ನೀಡುವ ರಾಜದಂಡ ಸೆಂಗೋಲ್ ನಿಂದ ಶುರುವಾಗುವ ಟೀಸರ್ ಪ್ರೇಕ್ಷಕರಿಗೆ ಸಖತ್ ವಿಷ್ಯುವಲ್ ಟ್ರೀಟ್ ಕೊಡುತ್ತದೆ. ಕ್ರಿ ಶ 985 ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಯೋಧನಾಗಿ ನಿಖಿಲ್ ಅಬ್ಬರಿಸಿದ್ದು, ಭಾರತೀಯ ಇತಿಹಾಸ ಹಾಗೂ ಪುರಾಣದ ಸುತ್ತ ಸಿನಿಮಾ ಸಾಗುತ್ತದೆ.
ಪಿಕ್ಸೆಲ್ ಸ್ಟುಡಿಯೋ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ಸ್ವಯಂಭು ಎಂದರೆ ಸ್ವಯಂ ಹುಟ್ಟು ಎಂದರ್ಥ.
ಸಹಸ್ರಮಾನಗಳ ಹಿಂದಿನ ಕಥೆ ಒಳಗೊಂಡಿರುವ ಸ್ವಯಂಭು ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ಕೆಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ವಿಜಯ್ ಕಾಮಿಸೆಟ್ಟಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ. ತಮ್ಮಿರಾಜು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಭರತ್ ಕೃಷ್ಣಮಾಚಾರಿ ಆಕ್ಷನ್ ಕಟ್ ಹೇಳಿರುವ ಸ್ವಯಂಭು ಸಿನಿಮಾದಲ್ಲಿ ಸಂಯುಕ್ತ ನಾಯಕಿಯಾಗಿ ನಟಿಸುತ್ತಿದ್ದು, ನಭಾ ನಟೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರವು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಚೈನೀಸ್, ಸ್ಪಾನಿಷ್ ಹಾಗೂ ಅರೇಬಿಕ್ ಭಾಷೆಯಲ್ಲಿ ತೆರೆಗೆ ಬರಲಿದೆ.
