ಮಾಸ್, ಆಕ್ಷನ್ ಕಂಟೆಂಟ್ ಇರುವ ಚಿತ್ರಗಳು ಹೆಚ್ಚಾಗಿ ತನ್ನ ಟೈಟಲ್ ನಿಂದಲೇ ಹೆಚ್ಚು ಗಮನ ಸೆಳೆಯುತ್ತವೆ. ಅಂಥದ್ದೇ ಮತ್ತೊಂದು ಚಿತ್ರ ಇದೇ ತಿಂಗಳ ಕೊನೆಯಲ್ಲಿ ಸೆಟ್ಟೇರಲಿದೆ, ವಿಶೇಷವಾಗಿ ಈ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್ ನೀಡಿದ್ದಾರೆ.

ಇದೇ ತಿಂಗಳ 26ರಂದು ಅದ್ದೂರಿಯಾಗಿ ಮುಹೂರ್ತ ಆಚರಿಸಿಕೊಳ್ಳಲಿರೋ ಆ ಚಿತ್ರದ ಹೆಸರು “ಕವಳ”. ಕವಳ ಎಂದರೆ ಭಿಕ್ಷೆ. ಮಾಸ್ ಚಿತ್ರಕ್ಕೆ ಈ ಟೈಟಲ್ ಎಷ್ಟು ಸೂಕ್ತ ಎಂಬುದಕ್ಕೆ ಮುಹೂರ್ತದ ದಿನ ಉತ್ತರ ನೀಡುತ್ತೇನೆ ಎನ್ನುತ್ತಾರೆ ನಿರ್ದೇಶಕ ಶ್ರೀ ಜೈ.
ರಾಧಾಕೃಷ್ಣ ಆರ್ಟ್ಸ್ ಹಾಗೂ ಡ್ರೀಮ್ ವರ್ಲ್ಡ್ ಸಿನಿಮಾಸ್ ಮೂಲಕ ಲೋಕೇಶ್ ಬಿ. ಹಾಗೂ ಅಡವಯ್ಯ ಪೂಜಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಕವಳ ಚಿತ್ರದ ಟೈಟಲ್ ಪೋಸ್ಟರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಶಿವರಾತ್ರಿಯ ಶುಭ ದಿನದಂದು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಶಿವಣ್ಣ ಇವತ್ತು ಶಿವರಾತ್ರಿ ಹಬ್ಬ, ಈ ಚಿತ್ರದ ಟೈಟಲ್ ತುಂಬಾ ಆಕರ್ಷಕವಾಗಿದೆ. ನಿರ್ದೇಶಕರ ಹಿಂದಿನ ಸಿನಿಮಾ ನೋಡಿದ್ದೇನೆ, ಇದೇ ತಿಂಗಳ 26ಕ್ಕೆ ಈ ಚಿತ್ರದ ಮುಹೂರ್ತ ನಡೆಯಲಿದೆ, ಚಿತ್ರ ಚೆನ್ನಾಗಿ ಮೂಡಿಬರಲಿ ಎಂದು ಶುಭ ಹಾರೈಸಿದ್ದಾರೆ.
ಈ ಹಿಂದೆ ದುನಿಯಾ ವಿಜಯ್ ಅಭಿನಯದ ಆರ್.ಎಕ್ಸ್.ಸೂರಿ, ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀ ಜೈ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಸಂದೀಪ್ ನಾಗರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಪೋಸ್ಟರ್ ಅಷ್ಟೇ ವಿಭಿನ್ನವಾಗಿದೆ. ನೀಲ ವರ್ಣದ, ರುದ್ರಾಕ್ಷಿ ಧರಿಸಿದ ಕೈಯಲ್ಲಿ ಮಚ್ಚು ಕೊಟ್ಟಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಚಿತ್ರಕ್ಕೆ ಎ.ಕರುಣಾಕರನ್ ಅವರ ಛಾಯಾಗ್ರಹಣ, ಕೆಕೆ.ಸೆಂಥಿಲ್ ಪ್ರಸಾದ್ ಅವರ ಸಂಗೀತ, ಅರ್ಜುನ್ ರಾಜ್, ವಿಕ್ರಮ್ ಮೋರ್ ಅವರ ಸಾಹಸ, ಕಲೈ, ಮುರಳಿ ಅವರ ನೃತ್ಯ, ದೀಪು ಎಸ್.ಕುಮಾರ್ ಅವರ ಸಂಕಲನವಿದೆ.
ಕವಳ ಚಿತ್ರದಲ್ಲಿ ಹಿರಿಯ ನಟರಾದ ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಸಮುದ್ರಖನಿ, ಈಶ್ವರಿರಾವ್, ಬಲ ರಾಜವಾಡಿ, ಕಿಶೋರ್, ಶ್ರವಣ್,ಗಿಲ್ಲಿ, ಪ್ರಕಾಶ್ ತುಮ್ಮಿನಾಡ್ ಹಾಗೂ ಇತರರು ನಟಿಸುತ್ತಿದ್ದಾರೆ
