ಚಿಕ್ಕಮಗಳೂರು: ಧರ್ಮಸ್ಥಳ ದರ್ಶನ ಮುಗಿಸಿ ವಾಪಾಸ್ ಬರುವಾಗ ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ದುರ್ಮರಣ ಹೊಂದಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ವಿಲೇಜ್ ಬಳಿ ನಡೆದಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಮೆಸ್ಕಾಂ ಲಾರಿಗೆ ಓಮಿನಿ ಡಿಕ್ಕಿಯಾಗಿದ್ದು, ಓಮ್ನಿಯಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಓಮಿನಿಗೆ ಆಲ್ಟೋ ಕಾರು ಡಿಕ್ಕಿ ಹೊಡೆದಿದೆ. ಆದ್ರೆ ಆಲ್ಟೋ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಮೆಸ್ಕಾಂ ಲಾರಿ ಹೋಗುತ್ತಿದ್ದು, ಧರ್ಮಸ್ಥಳದಿಂದ ಚಿತ್ರದುರ್ಗದ ಕಡೆಗೆ ಹೋಗ್ತಿದ್ದ ಓಮ್ನಿಗೆ ಡಿಕ್ಕಿ ಹೊಡೆದಿದೆ.

ಹಂಪಯ್ಯ (೬೦) ಇವರ ಪತ್ನಿ ಪ್ರೇಮಾ, ಮಂಜಯ್ಯ, ಪ್ರಭಾಕರ್ ಎಂಬುವವರು ಅಪಘಾತದಲ್ಲಿ ಮೃತಪಟ್ಟವರು. ಮೃತರೆಲ್ಲರೂ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚನ್ನಪಟ್ಟಣ ಗ್ರಾಮದವರು ಎಂದು ತಿಳಿದುಬಂದಿದೆ. ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐದಾರು ಆ್ಯಂಬುಲೆನ್ಸ್ ದೌಡಾಯಿಸಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಡಿಕ್ಕಿಯ ರಭಸಕ್ಕೆ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ರಸ್ತೆಯಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಭೀಕರ ಅಪಘಾತ ಕಂಡು ಜನ ಬೆಚ್ಚಿಬಿದ್ದಿದ್ದಾರೆ.